ಬೆಂಗಳೂರು: ವಿಜಯಪುರದಲ್ಲಿ ರೈತರ ಜಮೀನಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವುದನ್ನು ಖಂಡಿಸಿ ಬಿಜೆಪಿ ನಾಯಕರು ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ನೆಟ್ಟಿಗರಿಂದ ಅಪಸ್ವರ ಕೇಳಿಬಂದಿದೆ.
ವಕ್ಫ್ ಮಂಡಳಿ ನೋಟಿಸ್ ನೀಡಿರುವುದನ್ನು ಖಂಡಿಸಿ ನಿನ್ನೆ ಬಿಜೆಪಿ ನಾಯಕರಾದ ಗೋವಿಂದ ಕಾರಜೋಳ, ಎನ್ ರವಿಕುಮಾರ್ ಸೇರಿದಂತೆ ಕೆಲವು ನಾಯಕರು ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳ ಮುಂದೆ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು.
ಆದರೆ ಇದಕ್ಕೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು ನಿಮ್ಮ ಆಕ್ರೋಶ ಕೇವಲ ಸೋಷಿಯಲ್ ಮೀಡಿಯಾ ಹೇಳಿಕೆಗಳಿಗೆ ಮಾತ್ರ ಸೀಮಿತವಾದರೆ ಸಾಕೇ ಎಂದು ಪ್ರಶ್ನೆ ಮಾಡಿದ್ದಾರೆ. ವಕ್ಫ್ ಮಂಡಳಿ ಜನ ಸಾಮಾನ್ಯರ ಆಸ್ತಿ ಕಬಳಿಸುತ್ತಿದೆ ಎಂದು ಮಾಧ್ಯಗಳ ಮುಂದೆ ಬೊಬ್ಬೆ ಹಾಕಿದರೆ ಸಾಕೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಪ್ರಶ್ನೆ ಮಾಡಿದ್ದಾರೆ.
ವಕ್ಫ್ ಬೋರ್ಡ್ ರೈತರಿಂದ ಅಕ್ರಮವಾಗಿ ಮತ್ತು ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳುತ್ತಿದೆ. ಇದನ್ನು ತಡೆಯಲು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಮಾಡಿ. ಜನರನ್ನು ಎಚ್ಚರಿಸಿ. ಅದು ಬಿಟ್ಟು ಮಾಧ್ಯಮಗಳ ಮುಂದೆ ಮಾತ್ರ ಹೀಗೆ ಹೇಳಿಕೆ ಕೊಡುತ್ತಿದ್ದರೆ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ.