ಬೆಂಗಳೂರು: ವಿಜಯಪುರದಲ್ಲಿ ಸಚಿವ ಜಮೀರ್ ಅಹ್ಮದ್ ಸೂಚನೆ ಮೇರೆಗೆ ರೈತರ ಜಮೀನುಗಳಿಗೂ ಅಧಿಕಾರಿಗಳು ವಕ್ಫ್ ಬೋರ್ಡ್ ಆಸ್ತಿ ನೋಟಿಸ್ ನೀಡಿರುವುದರ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಸತಿ, ವಕ್ಫ್ ಸಚಿವ ಜಮೀರ್ ಅಹ್ಮದ್ ಸೂಚನೆ ಮೇರೆಗೆ ವಿಜಯಪುರದ ಅಧಿಕಾರಿಗಳು ಕೆಲವು ರೈತರ ಜಮೀನಿಗೂ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿದ್ದಾರೆ. ಆದರೆ ಒಂದೇ ಒಂದು ದಾಖಲೆಗಳಲ್ಲೂ ಇದು ವಕ್ಫ್ ಬೋರ್ಡ್ ಗೆ ಹೇಗೆ ಸೇರುತ್ತದೆ ಎಂಬುದಕ್ಕೆ ಕಾರಣಗಳಿಲ್ಲ. ಜಮೀರ್ ಅಹ್ಮದ್ ಮತ್ತು ಸಿದ್ದರಾಮಯ್ಯ ಸೇರಿಕೊಂಡು ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರಾ ಎಂದು ತೇಜಸ್ವಿ ಸೂರ್ಯ ಆಕ್ರೋಶ ಹೊರಹಾಕಿದ್ದಾರೆ.
ಈಗಾಗಲೇ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ವಕ್ಫ್ ನೋಟಿಸ್ ಗೆ ಸಂಬಂಧಿಸಿದಂತೆ ಬೃಹತ್ ಪ್ರತಿಭಟನಾ ಸಮಾವೇಶ ನಡೆದಿದೆ. ವಿಜಯಪುರದಲ್ಲಿ 10 ಸಾವಿರ ಎಕರೆ ಜಮೀನನ್ನು ವಕ್ಫ್ ಆಸ್ತಿ ಎಂದು ಗುರುತು ಹಾಕಲು ಜಮೀರ್ ಆಹ್ಮದ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.
ಇದರ ನಡುವೆ ನೋಟಿಸ್ ಪಡೆದವರ ಜೊತೆಗಿನ ಸಭೆಯಲ್ಲಿ ಇಂದು ತೇಜಸ್ವಿ ಸೂರ್ಯ ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೂಗಳಿಗೆ ಅಪಮಾನ ಮಾಡಿ ಮುಸ್ಲಿಮರಿಗಷ್ಟೇ ಆಸ್ತಿ ಕೊಡಲು ಹೊರಟಿದ್ದೀರಾ? ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಸಂವಿಧಾನದ ಪ್ರಕಾರ ಸರ್ಕಾರ ನಡೆಸಬೇಕೇ ಹೊರತು ಷರಿಯಾ ಕಾನೂನು ಪ್ರಕಾರ ಅಲ್ಲ. ಜಮೀರ್ ಅಹ್ಮದ್ ಹೇಳಿದರು, ಮಸೀದಿಯ ಮುಲ್ಲಾ ಹೇಳಿದರು ಎಂದು ಕೆಲಸ ಮಾಡುವುದಲ್ಲ. ಇದು ಮುಂದುವರಿದರೆ ಹೈಕೋರ್ಟ್ ಮತ್ತು ಲೋಕಾಯುಕ್ತಕ್ಕೆ ಹೋಗಿ ನಿಮ್ಮನ್ನು ಅಮಾನತು ಮಾಡಬೇಕಾಗುತ್ತದೆ ಎಂದು ತೇಜಸ್ವಿ ಸೂರ್ಯ ಎಚ್ಚರಿಕೆ ನೀಡಿದ್ದಾರೆ.