Select Your Language

Notifications

webdunia
webdunia
webdunia
webdunia

ಗಣತಿ ಸುನಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಕೊಚ್ಚಿ ಹೋಗುತ್ತಾರೆ: ಕುಮಾರಸ್ವಾಮಿ

ಕರ್ನಾಟಕ ಜಾತಿ ಗಣತಿ ವರದಿ

Sampriya

ಬೆಂಗಳೂರು , ಬುಧವಾರ, 16 ಏಪ್ರಿಲ್ 2025 (17:36 IST)
ಬೆಂಗಳೂರು: ಅಕ್ರಮಬದ್ಧ ಜಾತಿ ಗಣತಿ ಬಗ್ಗೆ ಜನರ ಆಕ್ರೋಶ ಸರಿ ಇದೆ. ಸುಳ್ಳುಲೆಕ್ಕ ಗೊತ್ತಿದೆ. ಕಳ್ಳಬೆಕ್ಕು ಕಣ್ಮುಚ್ಚಿ, ಕದ್ದು ಹಾಲು ಕುಡಿದರೆ ಲೋಕಕ್ಕೆ ಕಾಣದೇ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಆಕ್ರೋಶ ಹೊರಹಾಕಿದರು.

ಜಾತಿ ಗಣತಿ ವರದಿ ಬಗ್ಗೆ ರಾಜ್ಯ ಕಾಂಗ್ರೆಸ್ ಹಾಗು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಗಣತಿ ಹೆಸರಿನಲ್ಲಿ ಜನರನ್ನು ಛಿದ್ರಗೊಳಿಸಿ ರಾಜ್ಯದ ನೆಮ್ಮದಿಗೆ ಕೊಳ್ಳಿ ಇಟ್ಟು ಆ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವುದು ಕಾಂಗ್ರೆಸ್ ಸರ್ಕಾರದ ಹಿಡೆನ್‌ ಅಜೆಂಡಾ! ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಗಣತಿಯನ್ನೇ ಗುರಾಣಿ ಮಾಡಿಕೊಂಡಿದೆ!

ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ?

ಹೀಗೆಂದರೇನು ಸನ್ಮಾನ್ಯ ಮುಖ್ಯಮಂತ್ರಿಗಳೇ?  ಕನಕದಾಸರ ಆಶಯ ಅರ್ಥಪೂರ್ಣ. ನಿಮ್ಮ ಪ್ರಾಯೋಜಿತ ಗಣತಿ ವರದಿಯ ದುರಾಶಯ ಪ್ರಶ್ನಾರ್ಹ. ಹೇಳುವುದು ಒಂದು, ಮಾಡಿದ್ದು ಇನ್ನೊಂದು.

ಇವನಾರವ, ಇವನಾರವ,
ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ,
ಇವನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ..

ಎಲ್ಲರನ್ನೂ ಒಳಗೊಳ್ಳುವ  ಬಸವಣ್ಣನವರ ವಚನವನ್ನು ಬರೆದುಕೊಂದ್ದೀರಿ. ಇವರು ನಮ್ಮವರಲ್ಲ, ಇವ ನಮ್ಮನಲ್ಲ..ʼ ಎಂದು ಕೃತಿಯಲ್ಲಿಯೇ ತೋರುತ್ತೀರಿ! ಬೂಟಾಟಿಕೆಗೂ ಇತಿಮಿತಿ ಬೇಡವೇ ಸಿದ್ದರಾಮಣ್ಣ..?

ಸಾಮಾಜಿಕ ನ್ಯಾಯ ಎಂದರೆ ನಿಮಗೆ ಬೇಡವಾದ ಸಮಾಜಗಳ ತುಚ್ಛೀಕರಣ!
ಸಾಮಾಜಿಕ ನ್ಯಾಯವೆಂದರೆ ಒಂದು  ನಿರ್ದಿಷ್ಟ ಸಮಾಜದ ತುಷ್ಠೀಕರಣ!!
ಜಾತಿ ಸಮೀಕರಣವಲ್ಲ, ರಾಜಕೀಯ ಲಾಭಕ್ಕೆ ಜಾತಿಗಳ ಏಕೀಕರಣಕ್ಕೆ ಕೈ ಹಾಕಿದ್ದೀರಿ!

ಗಣತಿಯ ಲಾಭ ನಿಮಗೋ? ನಿಮಗೆ ರಾಜಕೀಯ ಆಶ್ರಯ ಕೊಟ್ಟ ಕಾಂಗ್ರೆಸ್‌ ಪಕ್ಷಕ್ಕೋ?  ನಿಮ್ಮ ಒಳಮರ್ಮ ರಾಹುಲ್ ಗಾಂಧಿ ಅರ್ಥವಾದಂತೆ ಇಲ್ಲ, ಪಾಪ..

ಹಿಂದೆ ಶ್ರೀ ವೀರೇಂದ್ರ ಪಾಟೀಲ್‌ ಅವರಿಗೆ ಎಸಗಿದ ಅನ್ಯಾಯಕ್ಕೆ ನಿಮ್ಮ ಪಕ್ಷ ಬೆಲೆ ತೆತ್ತಿದೆ, ನೆನಪಿಲ್ಲವೇ? ನೀವೂ, ನಿಮ್ಮ ಪಕ್ಷ ಇತಿಹಾಸದಿಂದ ಪಾಠ ಕಲಿಯುವುದಿಲ್ಲ. ತಪ್ಪು ತಿದ್ದಿ ನಡೆಯುವ ಗುಣಲಕ್ಷಣ ನಿಮಗೂ ಇಲ್ಲ, ನಿಮ್ಮ ಪಕ್ಷಕ್ಕೂ ಇಲ್ಲ.

ನೆಮ್ಮದಿಯಾಗಿದ್ದ ಕರ್ನಾಟಕವನ್ನು ಕೆಣಕಿದ್ದೀರಿ. ಗಣತಿ ಸುನಾಮಿಯಲ್ಲಿ ಕೊಚ್ಚಿ ಹೋಗುತ್ತೀರಿ. ಜನರಿಗೆ ನಿಮ್ಮ ಅಸಲಿಯೆತ್ತು ಗೊತ್ತಾಗಿದೆ ಎಂದು ಆಕ್ರೋಶ ಹೊರಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಪೆ: ಮಸೀದಿ ಆವರಣದ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆ