ಉಡುಪಿ: ಇಲ್ಲಿನ ಮಲ್ಪೆ ಶೌಚಾಲಯದಲ್ಲಿ 8 ತಿಂಗಳ ಭ್ರೂಣ ಪತ್ತೆ ಪ್ರಕರಣ ಸಂಬಂಧ ಕೊನೆಗೂ ಈ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದರಿಂದ ಅಪರಿಚಿತ ವ್ಯಕ್ತಿ ಮೇಲೆ ಮಲ್ಪೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಈ ಬಗ್ಗೆ ಸಿಸಿಟಿವಿ ಮತ್ತು ತಾಂತ್ರಿಕ ಸಾಕ್ಷಿಗಳನ್ನು ಪರಿಶೀಲಿಸಿದಾಗ ಮಗುವಿನ ತಾಯಿ ಯಾರೆಂದು ಪತ್ತೆಯಾಗಿದೆ ಎಂದಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಉಡುಪಿ ಎಸ್‌ಪಿ ಡಾ.ಅರುಣ್ ಕುಮಾರ್, ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನವಜಾತ ಶಿಶು ಶವ ಪತ್ತೆ ಪ್ರಕರಣ ದಾಖಲಾಗಿದೆ. ಜಾಮಿಯಾ ಮಸೀದಿ ಆವರಣದ ಶೌಚಾಲಯದಲ್ಲಿ ಪತ್ತೆಯಾದ ನವಜಾತ ಶಿಶುವಿನ ಸಂಬಂಧ ಮಸೀದಿಯವರು ದೂರು ನೀಡಿದ್ದಾರೆ. ಈ ಮಗುವಿನ ಶವ ಎಲ್ಲಿಂದ ಬಂತು ಎಂದು ತನಿಖೆ ನಡೆಸಲಾಗಿದೆ ಎಂದು ತಿಳಿಸಿದರು.
ಇದೀಗ ತನಿಖೆಯಲ್ಲಿ ಸ್ಥಳೀಯ ಯುವತಿಯೊಬ್ಬಳ ಮಗು ಎಂಬುದು ತಿಳಿದುಬಂದಿದೆ. ಆಕೆಯಿಂದ ಸ್ವ-ಇಚ್ಛಾ ಹೇಳಿಕೆ ಪಡೆಯಲಾಗಿದೆ. ಆಕೆ ತನ್ನದೇ ಮಗು ಎಂದು ಒಪ್ಪಿಕೊಂಡಿದ್ದಾಳೆ.
ಗರ್ಭಪಾತ ಮಾಡಿಸಿಕೊಂಡಿದ್ದ ಮಹಿಳೆ ಶೌಚಾಲಯದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಸದ್ಯ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಕಾನೂನು ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಕೆಲವೊಂದು ಅನುಮಾನಾಸ್ಪದ ಆಡಿಯೋಗಳು ವೈರಲ್ ಆಗಿವೆ. ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.