Select Your Language

Notifications

webdunia
webdunia
webdunia
webdunia

ಸೋನಿಯಾ, ರಾಹುಲ್ ವಿರುದ್ಧ ಇಡಿ ಜಾರ್ಜ್‌ಶೀಟ್‌: ಮೋದಿ, ಶಾ ವಿರುದ್ಧ ಪ್ರತಿಭಟನೆಗೆ ಕೈಜೋಡಿಸಿ ಎಂದ ಸಿದ್ದರಾಮಯ್ಯ

ಸೋನಿಯಾ ಗಾಂಧಿ

Sampriya

ಬೆಂಗಳೂರು , ಬುಧವಾರ, 16 ಏಪ್ರಿಲ್ 2025 (11:53 IST)
ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಜಾರ್ಜ್‌ಶೀಟ್‌ ಸಲ್ಲಿಸಿರುವ ಇಡಿ ಕ್ರಮದ ಬಗ್ಗೆ ಗೃಹ ಸಚಿವ ಅಮಿತ್ ಶಾ  ಅವರ ಸೇಡಿನ ರಾಜಕಾರಣದ ಮುಂದುವರಿದ ಭಾಗವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

‘ಇದು ಕೇವಲ ಕಾಂಗ್ರೆಸ್‌ ಪಕ್ಷದ ಇಬ್ಬರು ನಾಯಕರು ಅಥವಾ ಪಕ್ಷದ ವಿರುದ್ಧದ ಸೇಡಿನ ಕ್ರಮವಲ್ಲ. ಇದು ವಿರೋಧದ ದನಿಯನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ದೇಶದ ವಿರೋಧ ಪಕ್ಷಗಳು ಮತ್ತು ಪ್ರಜಾಪ್ರಭುತ್ವಪ್ರೇಮಿ ನಾಗರಿಕರಿಗೆ ನರೇಂದ್ರ ಮೋದಿ ಸರ್ಕಾರ ನೀಡಿರುವ ಎಚ್ಚರಿಕೆಯಾಗಿದೆ’ ಎಂದು ಹೇಳಿದ್ದಾರೆ.

‘ದ್ವೇಷದ ರಾಜಕಾರಣವನ್ನು ಎದುರಿಸುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ ಇದನ್ನು ಕೂಡಾ ಸತ್ಯ ಮತ್ತು ನ್ಯಾಯದ ಬಲದಿಂದ ಎದುರಿಸಲಿದೆ’ ಎಂದು ತಿಳಿಸಿದ್ದಾರೆ.

‘ಸ್ವಾಯತ್ತ ತನಿಖಾ ಸಂಸ್ಥೆಯಾದ ಇ.ಡಿಯನ್ನು ವಿರೋಧ ಪಕ್ಷದ ನಾಯಕರ ವಿರುದ್ಧ ದ್ವೇಷ ಸಾಧಿಸಲು ಆಯುಧವನ್ನಾಗಿ ಬಳಸುತ್ತಾ ಬಂದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಯಾಗಿರುವ ಸುಳ್ಳು ಆರೋಪವನ್ನು ಬಳಸಿಕೊಂಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದಂತೆಯೇ ಈ ದ್ವೇಷದ ರಾಜಕಾರಣ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿದೆ’ ಎಂದರು.

‘ವಿಚಾರಣೆಯ ನೆಪದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಸೇರಿದಂತೆ ನಮ್ಮ ಪಕ್ಷದ ಪ್ರಮುಖ ನಾಯಕರಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಿ ಪೀಡಿಸಿದ ಇ.ಡಿ ಯು ಅದರಿಂದ ಯಾವುದೇ ಫಲ ಸಿಗದೆ ಇದ್ದಾಗ ಕಲ್ಪಿತ ಕತೆಗಳನ್ನು ಕಟ್ಟಿ ಆರೋಪ ಪಟ್ಟಿ ಸಲ್ಲಿಸಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಸರ್ವಾಧಿಕಾರಿ ಧೋರಣೆಯ ವಿರುದ್ದ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಬೀದಿಗೆ ಇಳಿದು ಇದನ್ನು ಪ್ರತಿಭಟಿಸಲಿದ್ದಾರೆ. ಈ ಪ್ರತಿರೋಧಕ್ಕೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕಾಗಿದೆ’ ಎಂದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರಿಯಾಣ: ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಪತಿಯನ್ನೇ ಮುಗಿಸಿದ ಪತ್ನಿ