Publish Date: Fri, 26 Dec 2025 (10:36 IST)
Updated Date: Fri, 26 Dec 2025 (11:55 IST)
ಚಿತ್ರದುರ್ಗ: ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀ ಬರ್ಡ್ ಬಸ್ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಗಂಭೀರ ಗಾಯಗೊಂಡ ಬಸ್ ಚಾಲಕ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ನಿನ್ನೆ 6 ಮಂದಿ ಸಾವನ್ನಪ್ಪಿರುವುದು ಖಚಿತವಾಗಿತ್ತು. ಕೆಲವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದರಲ್ಲಿ ಬಸ್ ಚಾಲಕ ಮೊಹಮ್ಮದ್ ರಫೀಕ್
ಕೂಡಾ ಒಬ್ಬ. ಆತ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದರೊಂದಿಗೆ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಬಸ್ ಕ್ಲೀನರ್ ಪವಾಡ ಸದೃಶವಾಗಿ ಒಂದೂ ಗಾಯಗಳಿಲ್ಲದೇ ಪಾರಾಗಿದ್ದ. ಆದರೆ ಚಾಲಕನಿಗೆ ಗಾಯಗಳಾಗಿತ್ತು. ಬಸ್ ಗೆ ಢಿಕ್ಕಿ ಹೊಡೆದಿದ್ದ ಕಂಟೇನರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದ. ಇದೀಗ ಬಸ್ ಚಾಲಕನೂ ಮೃತಪಟ್ಟಿದ್ದಾನೆ. ಮನೆಗೆ ಆತನೇ ಆಧಾರವಾಗಿದ್ದ. ಇದೀಗ ಆತನನ್ನು ಕಳೆದುಕೊಂಡ ಕುಟುಂಬದವರ ರೋಧನೆ ಮುಗಿಲು ಮುಟ್ಟಿದೆ.
ಮೊನ್ನೆಯಷ್ಟೇ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್ ಗೆ ಕಂಟೇನರ್ ಢಿಕ್ಕಿ ಹೊಡೆದು ಕ್ಷಣಾರ್ಧದಲ್ಲಿ ಬಸ್ ಗೆ ಬೆಂಕಿ ಹತ್ತಿಕೊಂಡಿತ್ತು. ಘಟನೆಯಲ್ಲಿ ಬಸ್ ನಿಂದ ಹೊರಬರಲಾಗದೇ 6 ಮಂದಿ ಸ್ಥಳದಲ್ಲೇ ಸಜೀವ ದಹನವಾಗಿದ್ದರು.