ಮೈಸೂರು: ಚಿತ್ರದುರ್ಗದಲ್ಲಿ ನಿನ್ನೆ ಬಸ್ ದುರಂತದ ಶಾಕ್ ಇನ್ನೂ ಮಾಸಿಲ್ಲ. ಅದರ ನಡುವೆಯೇ ಇಂದು ಮೈಸೂರು ಅರಮನೆ ಮುಂಭಾಗ ಸ್ಪೋಟವಾಗಿ ಓರ್ವನ ಸಾವಾದ ಘಟನೆ ನಡೆದಿದೆ.
ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ತುಂಬಿದ್ದ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಬಲೂನ್ ವ್ಯಾಪಾರಿ ಸಲೀಂ ಎಂಬಾತ ಮೃತಪಟ್ಟಿದ್ದಾನೆ. ಈತ ಅರಮನೆ ಸುತ್ತಮುತ್ತವೇ ಹೀಲಿಯಂ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಬಲೂನ್ ಮಾರಾಟ ಮಾಡುತ್ತಿದ್ದ. ನಿನ್ನೆ ರಾತ್ರಿ ವರಾಹ ಗೇಟ್ ಬಳಿ ಬಲೂನ್ ಮಾರಾಟ ಮುಗಿಸಿ, ದೊಡ್ಡಕೆರೆ ಮೈದಾನದ ಎದುರುಗಡೆ ಇರುವ ಜಯಮಾರ್ತಾಂಡ ಗೇಟ್ ಬಳಿ ಬಂದಾಗ ಅನಾಹುತ ಸಂಭವಿಸಿದೆ.
ಪೊಲೀಸರ ಪ್ರಕಾರ, ಸಿಲಿಂಡರ್ ಅನ್ನು ವೇಗವಾಗಿ ಆನ್ ಆಫ್ ಮಾಡಿದ್ದರಿಂದ ಹೀಟ್ ಹೆಚ್ಚಾಗಿ ಸ್ಪೋಟವಾಗಿದೆ ಎನ್ನಲಾಗಿದೆ. ಇದರ ಪರಿಣಾಮವೇ ಸ್ಪೋಟದ ಪರಿಣಾಮ ತೀವ್ರವಾಗಿದ್ದು ಬಲೂನ್ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಲಾಗಿದೆ.