ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗ ಭಾರೀ ಚಳಿಯ ವಾತಾವರಣವಿರಲಿದೆ. ಅದರಲ್ಲೂ ನಿನ್ನೆಗೆ ಹೋಲಿಸಿದರೆ ಇಂದು ಮತ್ತಷ್ಟು ಚಳಿ ತೀವ್ರವಾಗಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಉತ್ತರ ಕರ್ನಾಟಕದಲ್ಲಂತೂ ಶೀತ ಅಲೆಯ ಮುನ್ನೆಚ್ಚರಿಕೆಯಿದೆ. ಕೆಲವು ಜಿಲ್ಲೆಗಳಲ್ಲಿ ಈ ಬಾರಿ ದಾಖಲೆಯ ಕನಿಷ್ಠ ತಾಪಮಾನ ಕಂಡುಬಂದಿದೆ. ನಿನ್ನೆ ರಾಜ್ಯದ ಸರಾಸರಿ ಕನಿಷ್ಠ ತಾಪಮಾನ 17 ಡಿಗ್ರಿಯಷ್ಟಿತ್ತು. ಆದರೆ ಇಂದು ಇನ್ನಷ್ಟು ಕಡಿಮೆಯಾಗಲಿದ್ದು 16 ಡಿಗ್ರಿಯಷ್ಟಿರಲಿದೆ ಎಂದು ಹೇಳಲಾಗಿದೆ.
ಚಿಕ್ಕಮಗಳೂರು, ಕೊಡಗು, ಹಾಸನ, ಬೆಂಗಳೂರು, ಬೀದರ್, ಕಲಬುರಗಿ, ವಿಜಯಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ವಿಪರೀತ ಚಳಿ ಕಂಡುಬರಲಿದೆ. ಹೀಗಾಗಿ ಮುಂಜಾನೆ ಮತ್ತು ಸಂಜೆ ಮನೆಯಿಂದ ಹೊರಗೆ ಹೋಗದಿರುವುದೇ ಉತ್ತಮ.
ವಿಶೇಷವೆಂದರೆ ಈ ಬಾರಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಭಾರೀ ಚಳಿ ಕಂಡುಬರುತ್ತಿದೆ. ಕರಾವಳಿ ಜಿಲ್ಲೆಗಳಿಗೆ ಇಂದು ಕನಿಷ್ಠ ತಾಪಮಾನ 21 ಡಿಗ್ರಿಯಷ್ಟಿರುವ ಸಾಧ್ಯತೆಯಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳಿಗೆ ತಾಪಮಾನ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಮುಂದಿನ ವಾರದ ಅಂತ್ಯಕ್ಕೆ ಪರಿಸ್ಥಿತಿ ಕೊಂಚ ಸುಧಾರಿಸುವ ಸೂಚನೆಯಿದೆ.