ಬೆಂಗಳೂರು: ಹಳಸಿದ ಸಂಬಂಧಕ್ಕೆ ತೇಪೆ ಹಾಕಲು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ ಮಾಡಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಎರಡನೇ ಬಾರಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ಇದರ ಬಗ್ಗೆ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದು, ಇದೆಲ್ಲಾ ಕದನ ವಿರಾಮ ಎಂದಿದ್ದಾರೆ.
ಸಿನಿಮಾ ನೋಡುವಾಗ ಒಂದು ಇಂಟರ್ ವೆಲ್ ಎಂದು ಬರುತ್ತದಲ್ಲಾ? ಅದೇ ರೀತಿ ಇದೂ ಕೂಡಾ. ಹಳಸಿರುವ ಸಂಬಂಧಗಳಿಗೆ ತೇಪೆ ಹಚ್ಚಲು ಕಾಂಗ್ರೆಸ್ ನಾಯಕರು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಿದ್ದಾರೆ. ಈ ರೀತಿಯ ಸಿನಿಮೀಯ ನಾಟಕಗಳು ಫಲ ನೀಡುವುದಿಲ್ಲ.
ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರದ ನಾಟಕ, ಮೋಸದ ಆಟಗಳು ಬೇಕಾಗಿಲ್ಲ, ಜನತೆ ನಿರೀಕ್ಷಿಸುವುದು ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಮಾತ್ರ. ರಾಹುಲ್ ಗಾಂಧಿಯಂತಹ ಅವಿವೇಕಿ ನಾಯಕನನ್ನು ಇಟ್ಟುಕೊಂಡು ಕಾಂಗ್ರೆಸ್ ಈಗಾಗಲೇ ದೇಶದಲ್ಲಿ ಮಾಯವಾಗುತ್ತಿದೆ. ಇನ್ನು ಕೆಲವು ವರ್ಷ ಹೋದರೆ ಹುಡುಕಿದರೂ ಸಿಗಲ್ಲ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.