Select Your Language

Notifications

webdunia
webdunia
webdunia
webdunia

ತಾತ್ಕಾಲಿಕ ಸಿಎಂ ಬೇಡ, ರೈತರ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಬೇಕು: ಬಿವೈ ವಿಜಯೇಂದ್ರ

BY Vijayendra

Krishnaveni K

ದಾವಣಗೆರೆ , ಮಂಗಳವಾರ, 25 ನವೆಂಬರ್ 2025 (18:10 IST)
ದಾವಣಗೆರೆ: ರಾಜ್ಯಕ್ಕೆ ತಾತ್ಕಾಲಿಕ ಮುಖ್ಯಮಂತ್ರಿಗಳು ಬೇಡ; ರೈತರ ಜ್ವಲಂತ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಮತ್ತು ಸರಕಾರ ಬೇಕೆಂಬ ಅಪೇಕ್ಷೆ ಜನರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ರೈತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟಕ್ಕೆ ಇವತ್ತು ಚಾಲನೆ ನೀಡಿ ಅವರು ಮಾತನಾಡಿದರು. ಹಂಗಾಮಿ ಮುಖ್ಯಮಂತ್ರಿ, ತಾತ್ಕಾಲಿಕ ಮುಖ್ಯಮಂತ್ರಿ ರಾಜ್ಯಕ್ಕೆ ಬೇಕಾಗಿಲ್ಲ; ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೋ, ಇನ್ಯಾರು ಸಿಎಂ ಆಗುತ್ತಾರೋ ಎಂಬುದು ರಾಜ್ಯದ ಜನರಿಗೆ ಆಸಕ್ತಿ ಇಲ್ಲ. ಬೆಳಗಾವಿಯ ಚಳಿಗಾಲದ ಅಧಿವೇಶನ ಪ್ರಾರಂಭಕ್ಕೆ ಮುಂಚಿತವಾಗಿ ರೈತರ ಜ್ವಲಂತ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಮತ್ತು ಸರಕಾರ ಬೇಕೆಂಬ ಅಪೇಕ್ಷೆ ಜನರದು ಎಂದು ತಿಳಿಸಿದರು.

ಕಾಟಾಚಾರಕ್ಕೆ ಬೆಳಗಾವಿಯಲ್ಲಿ ಅಧಿವೇಶನ ಮಾಡಬೇಡಿ. ಯಾವ ಪುರುಷಾರ್ಥಕ್ಕೆ ಅಧಿವೇಶನ ಮಾಡಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ತಮ್ಮ ಸಮಸ್ಯೆಯನ್ನು ಬೆಂಗಳೂರಿನಲ್ಲೋ, ದೆಹಲಿಯಲ್ಲೇ ಬಗೆಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

 
ಪಾಪ ಮಲ್ಲಿಕಾರ್ಜುನ ಖರ್ಗೆಯವರ ಮಾತು ಕೇಳಿದರೆ ಅಯ್ಯೋ ಅನಿಸುತ್ತದೆ ಎಂದ ಅವರು, 50 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆಯವರು ಮೊನ್ನೆ ಅಸಹಾಯಕರಾಗಿ ಮಾತನಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಭವಿಷ್ಯವನ್ನು ರಾಜ್ಯದ ಜನರು ತೀರ್ಮಾನ ಮಾಡುವುದಿಲ್ಲ. ಯಾವುದೋ ವಿದೇಶದಲ್ಲಿ ಕೂತ ರಾಹುಲ್ ಗಾಂಧಿ ತೀರ್ಮಾನ ಮಾಡುತ್ತಾರೆ ಎಂದು ವಿಜಯೇಂದ್ರ ಅವರು ನುಡಿದರು.

ಯಾವ ಸರಕಾರ ರೈತರ ಹಿತಾಸಕ್ತಿ ಕಾಪಾಡಲು ಸಾಧ್ಯ ಇಲ್ಲವೋ, ಅಂಥ ಸರಕಾರವನ್ನು ಕಿತ್ತೊಗೆಯುವ ಶಕ್ತಿ, ತಾಕತ್ತು ರಾಜ್ಯದ ರೈತರಿಗೆ ಇದೆ ಎಂದು ಎಚ್ಚರಿಸಿದರು. ರೈತರ ಹೋರಾಟದ ಕಿಚ್ಚು ಬೆಂಗಳೂರಿನ ವಿಧಾನಸೌಧಕ್ಕೂ ತಲುಪಲಿದೆ. ಅದಕ್ಕೂ ಮುಂಚಿತವಾಗಿ ಕಬ್ಬು ಬೆಳೆಗಾರರು, ಮೆಕ್ಕೆ ಜೋಳದ ಬೆಳಗಾರರ ಸಮಸ್ಯೆ ಇತ್ಯರ್ಥ ಪಡಿಸಿ ಎಂದು ಒತ್ತಾಯಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದಾವಣಗೆರೆ: ಮೀನಿನ ಆಸೆಗೆ ಜೀವ ಕಳೆದುಕೊಂಡ್ರಾ ಇಬ್ಬರು ಯುವಕರು, ಏನಿದು ಘಟನೆ