ರಾಮನಗರ: ಪಕ್ಷದ ನಾಯಕರ ಬಳಿ ನಾನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಕೇಳಿಲ್ಲ. ನಾವು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುವವರು. ಪಕ್ಷವನ್ನು ಮುಜುಗರಕ್ಕೀಡು ಮಾಡುವುದಕ್ಕೆ ಅಥವಾ ದುರ್ಬಲಗೊಳಿಸುವುದಕ್ಕೆ ನಾನು ಇಷ್ಟಪಡುವುದಿಲ್ಲ. ನಾವಿರುವುದು ಪಕ್ಷ ಹಾಗೂ ಕಾರ್ಯಕರ್ತರಿಂದಾಗಿ, ನಮ್ಮಿಂದ್ದ ಪಕ್ಷವಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿರಿಯರಾದ ಸಿದ್ದರಾಮಯ್ಯ ಅವರು ಪಕ್ಷದ ಆಸ್ತಿ. ವಿರೋಧ ಪಕ್ಷದ ನಾಯಕರಾಗಿದ್ದ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಎರಡೂವರೆ ವರ್ಷ ಸಿಎಂ ಆಗಿ ಮುಗಿಸಿರುವ ಅವರು ಮುಂದಿನ ಬಜೆಟ್ ಕೂಡಾ ಮಂಡಿಸುವುದಾಗಿ ಹೇಳಿದ್ದಾರೆ ಎಂದರು.
ಇನ್ನೂ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನು ಕೂಡಾ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದು, ಪ್ರಚಾರದ ಸಂದರ್ಭದಲ್ಲಿ ಕೆಲವೆಡೆ ನನ್ನ ಮುಖ ನೋಡಿ ಮತ ಕೊಡಿ ಎಂದು ಕೇಳಿದ್ದುಂಟು. ಇನ್ನೂ ನನ್ನೊಂದಿಗೆ ಎಲ್ಲರೂ ಸಾಮೂಹಿಕವಾಗಿ ಮತ ಯಾಚಿಸಿದ್ದಾರೆ. ಅದರಿಂದಾಗಿಯೇ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.
ಇನ್ನೂ ತಮ್ಮ ಪರ ಕೆಲ ಶಾಸಕರು ಶಕ್ತಿ ಪ್ರದರ್ಶಿಸಲು ದೆಹಲಿ ಭೇಟಿ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಪರವಾಗಿ ದೆಹಲಿಗೆ ಹೋಗಿ ಎಂದು ಯಾರಿಗೂ ನಾನು ಹೇಳಿಲ್ಲ. ಫೋನ್ ಕರೆಯನ್ನು ಮಾಡಿಲ್ಲ, ಅದಲ್ಲದೆ ಯಾಕೆ ಹೋಗಿದ್ದೀರಿ ಎಂಬ ಪ್ರಶ್ನೆಯನ್ನು ಕೂಡಾ ಎತ್ತಿಲ್ಲ. ಕೆಲವರು ಸಚಿವರಾಗಲು ಓಡಾಡುತ್ತಿದ್ದಾರೆ. ಅದೆಲ್ಲಾ ಅವರಿಗೆ ಬಿಟ್ಟದ್ದು ಎಂದು ಪ್ರತಿಕ್ರಿಯಿಸಿದರು.