ಮಂಡ್ಯ: ಸಿಎಂ ಸ್ಥಾನ ನ್ಯಾಯಯುತವಾಗಿ ಡಿಕೆ ಶಿವಕುಮಾರ್‌ಗೆ ಸಿಗಬೇಕಿತ್ತು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಲಹೀನರಾಗಿದ್ದು, ಎಲ್ಲರಿಗೂ ಹೆದರಿಕೊಳ್ಳುವ ಹೈಕಮಾಂಡ್ ಆಗಿದ್ದರಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಅವರಿಗೆ ಸೀಟು ಬಿಟ್ಟು ಕೊಡ್ತಾರೆ ಅಂತ ಅನಿಸುತ್ತಿಲ್ಲ. ದೇವೇಗೌಡರ ಗರಡಿಯಲ್ಲಿ ಪಳಗಿದ ಸಿದ್ದರಾಮಯ್ಯನವರು ಅಭಿವೃದ್ಧಿ ಕೆಲಸ ಕಲಿತಿದ್ರೆ ರಾಜ್ಯಕ್ಕೆ ಒಳ್ಳೆಯದಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಅವರು ಬರೀ ರಾಜಕೀಯ ಮಾಡಿದರು. ಈಗಾಗಲೇ ಒಳ್ಳೆಯ ಕೆಲಸ ಮಾಡಿದ್ದರೆ, ಜನರೇ ಅವರ ಪರ ಧ್ವನಿ ಎತ್ತುತ್ತಿದ್ದರು. ಕೆಟ್ಟ ಆಡಳಿತ ನೀಡಿದರೂ ಸೀಟು ಬಿಟ್ಟು ಕೊಡುವ ಮನಸಿಲ್ಲ ಎಂದರು.
ನವೆಂಬರ್ ಕ್ರಾಂತಿ ಡಿಸೆಂಬರ್‌ನಲ್ಲಿ ಬ್ರಾಂತಿ ಆಗುತ್ತೆ. ಸತೀಶ್ ಜಾರಕಿಹೋಳಿ ಅವರನ್ನು ಎತ್ತಿ ಕಟ್ಟುವುದು, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಸದ್ಯ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಆಗುತ್ತಿದೆ. ನಾವು ರೈತರ ಪರ ಧ್ವನಿ ಎತ್ತಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ. ರಾಜ್ಯದಾದ್ಯಂತ ವಿಜಯೇಂದ್ರ, ಆರ್.ಅಶೋಕ್ ನೇತೃತ್ವದಲ್ಲಿ ಹೋರಾಟದ ಕಹಳೆ ಮೊಳಗಲಿದೆ ಎಂದು ಹೇಳಿದರು.