ಬೆಂಗಳೂರು: ಬಿಜೆಪಿ ಪ್ರತಿಭಟನೆಯ ಭಯಕ್ಕೇ ರಾಜ್ಯ ಸರ್ಕಾರ ವಿವಾದಿತ ಕ್ರಿಶ್ಚಿಯನ್ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆಯನ್ನು ಕೈಬಿಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಭಾರತೀಯ ಜನತಾ ಪಾರ್ಟಿ ಹಾಗೂ ಜಾಗೃತ ಹಿಂದೂ ಸಮುದಾಯಗಳ ಪ್ರತಿಭಟನೆಗೆ
ಕಾಂಗ್ರೆಸ್ ಸರ್ಕಾರ ಬೆಚ್ಚಿಬಿದ್ದಿದೆ. ಅದರ ಪರಿಣಾಮವಾಗಿ ಹಿಂದುಳಿದ ವರ್ಗಗಳ ಆಯೋಗ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಹೆಸರಿನೊಂದಿಗೆ ಸೇರಿಸಿ ಪ್ರಕಟಿಸಿದ್ದ ಪಟ್ಟಿ 'ಗುಂಡಿಗೆ' ಬಿದ್ದಿದೆ. ಅಲ್ಪಸಂಖ್ಯಾತರನ್ನು ಓಲೈಸುವುದೇ ತನ್ನ ಆದ್ಯತೆಯ ಕಾರ್ಯಸೂಚಿಯನ್ನಾಗಿರಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಹಿಂದೂ ಸಮುದಾಯದ ವಿರುದ್ಧ ಸಂದರ್ಭ ಬಂದಾಗಲೆಲ್ಲ ಕುತಂತ್ರ ಹೆಣೆಯುವುದರಲ್ಲಿ ನಿಸ್ಸೀಮತನ ತೋರುತ್ತಿದೆ.
'ಸಂದಿಯಲ್ಲಿ ಸಮಾರಾಧನೆ' ಮಾಡುವಂತೆ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆಯ ಹೆಸರಿನಲ್ಲಿ ಮತಾಂತರಕ್ಕೆ ಪರೋಕ್ಷ ಪ್ರೇರಣೆ ನೀಡಲು ಹೊರಟು ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಹೆಸರಿನಲ್ಲಿ ಪ್ರಕಟಿಸಿದ್ದ ಹುನ್ನಾರವನ್ನು ಸಮಯೋಚಿತವಾಗಿ ಬಯಲಿಗೆಳೆದ ಪರಿಣಾಮವಾಗಿ ಜನಾಕ್ರೋಶಕ್ಕೆ ಹೆದರಿ ಸರ್ಕಾರ ಆ ಹೆಸರುಗಳ ಪಟ್ಟಿಯನ್ನು ಬೇಷರತ್ತಾಗಿ ಕೈ ಬಿಡಿಸಿರುವುದು ಹಿಂದೂ ಸಮಾಜದ ಒಗ್ಗಟ್ಟಿನ ಆಕ್ರೋಶದ ಪ್ರತಿಫಲನವಾಗಿದೆ. ಇಂತಹ ಹಿಂದೂ ವಿರೋಧಿ ಕುಯುಕ್ತಿ ಚಟುವಟಿಕೆಗಳು ಮತ್ತೆ ತಲೆಯೆತ್ತಿದರೆ, ಈ ಸರ್ಕಾರದ ತಲೆದಂಡ ಆಗುವವರೆಗೂ ಬಿಜೆಪಿ ವಿರಮಿಸದೇ ಹೋರಾಡಲಿದೆ ಎಂದಿದ್ದಾರೆ.