Publish Date: Tue, 28 Jul 2026 (13:21 IST)
Updated Date: Tue, 28 Jul 2026 (13:25 IST)
ಬೆಂಗಳೂರು, ಜುಲೈ 28: ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರಿ ನೇಮಕಾತಿ ಅಕ್ರಮಗಳು, ಕರ್ನಾಟಕ ಲೋಕಸೇವಾ ಆಯೋಗ (KPSC)ದಲ್ಲಿನ ಭ್ರಷ್ಟಾಚಾರ ಹಾಗೂ ಖಾಲಿ ಇರುವ ಲಕ್ಷಾಂತರ ಸರ್ಕಾರಿ ಹುದ್ದೆಗಳ ಭರ್ತಿಯಲ್ಲಿ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ವೈಫಲ್ಯದಿಂದ ರಾಜ್ಯದ ಯುವಜನರ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಇಂದು ಪ್ರೀಡಂ ಪಾರ್ಕ್ ನಲ್ಲಿ ಕೆ ಪಿ ಎಸ್ ಸಿ ಸೇರಿದಂತೆ ವಿವಿಧ ಉದ್ಯೋಕಾಂಕ್ಷಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಯುವಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳು ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಯಾವುದೇ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಕಳೆದ ಹಲವು ವರ್ಷಗಳಿಂದ KPSC, FDA ಸೇರಿದಂತೆ ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ವ್ಯಾಪಕ ಅವ್ಯವಹಾರಗಳು ನಡೆಯುತ್ತಿವೆ. ಪರೀಕ್ಷೆಗಳಲ್ಲಿ ಹಣ ಪಡೆದು ಅನರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ವ್ಯವಸ್ಥೆ ರೂಪುಗೊಂಡಿದ್ದು, ಅರ್ಹ ಅಭ್ಯರ್ಥಿಗಳ ಭವಿಷ್ಯವನ್ನು ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ. ಈ ಮೂಲಕ ಸರ್ಕಾರಿ ನೇಮಕಾತಿ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವೇ ಕುಸಿಯುವಂತಾಗಿದೆ ಎಂದು ಅವರು ಹೇಳಿದರು.
ದೈಹಿಕ ಶಿಕ್ಷಣ, ಸಂಗೀತ, ಕನ್ನಡ, ವಿಜ್ಞಾನ, ಹಿಂದಿ ಸೇರಿದಂತೆ ವಿವಿಧ ವಿಷಯಗಳ ಶಿಕ್ಷಕರ ನೇಮಕಾತಿ ಹಾಗೂ GPSTR ಸೇರಿದಂತೆ ಹಲವು ನೇಮಕಾತಿಗಳು ಕಳೆದ 15ರಿಂದ 20 ವರ್ಷಗಳಿಂದ ನಡೆಯದೇ ಇರುವುದನ್ನು ವಿಜಯೇಂದ್ರ ತೀವ್ರವಾಗಿ ಖಂಡಿಸಿದರು. ಕಲ್ಯಾಣ ಕರ್ನಾಟಕ ಸೇರಿದಂತೆ ಅನೇಕ ಭಾಗಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಶಿಕ್ಷಣ ವ್ಯವಸ್ಥೆಯ ಮೇಲಿನ ಸರ್ಕಾರದ ಉದಾಸೀನತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಬಯೋಟೆಕ್ನಾಲಜಿ, ಚಿತ್ರಕಲೆ, ದೈಹಿಕ ಶಿಕ್ಷಣ, ಬಿ.ಕಾಂ., ಬಿ.ಎಡ್. ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಸಾವಿರಾರು ಅಭ್ಯರ್ಥಿಗಳು ವರ್ಷಗಳಿಂದ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಬಿಜೆಪಿ ಸದಾ ಅವರ ಹೋರಾಟದೊಂದಿಗೆ ನಿಂತಿದ್ದರೂ, ಸರ್ಕಾರ ಮಾತ್ರ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 35 ಸಾವಿರ ಶಿಕ್ಷಕರ ಹುದ್ದೆಗಳು ಇನ್ನೂ ಖಾಲಿ ಇವೆ ಎಂಬುದನ್ನು ಕಾಂಗ್ರೆಸ್ ನಾಯಕರೇ ಈ ಹಿಂದೆ ಸರ್ಕಾರದ ಗಮನಕ್ಕೆ ತಂದಿದ್ದರು. ಆದರೂ ಈವರೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸದಿರುವುದು ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಇತ್ತೀಚಿನ KPSC ನೇಮಕಾತಿ ಪ್ರಕ್ರಿಯೆಗಳಲ್ಲೂ ಗಂಭೀರ ಅಕ್ರಮಗಳ ಆರೋಪಗಳು ಕೇಳಿಬರುತ್ತಿವೆ. ವಿಶೇಷವಾಗಿ 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಒಂದೊಂದು ಹುದ್ದೆಗೆ ₹80 ಲಕ್ಷದಿಂದ ₹90 ಲಕ್ಷದವರೆಗೆ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪಗಳು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿವೆ ಎಂದು ವಿಜಯೇಂದ್ರ ಹೇಳಿದರು.
400 ಹುದ್ದೆಗಳ ನೇಮಕಾತಿಯಲ್ಲಿ ಸುಮಾರು ₹350 ಕೋಟಿ ಲಂಚದ ವಹಿವಾಟು ನಡೆದಿರಬಹುದೆಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ಹಣ ಯಾರಿಗೆ ತಲುಪಿದೆ? ಇದರ ಹಿಂದೆ ಯಾರು ಇದ್ದಾರೆ? ಎಂಬುದನ್ನು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ
KPSCಯಲ್ಲಿ ಪಾರದರ್ಶಕತೆ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ KPSC ಸೇರಿದಂತೆ ಎಲ್ಲಾ ನೇಮಕಾತಿ ಅಕ್ರಮಗಳನ್ನು ತಕ್ಷಣವೇ ಕೇಂದ್ರ ತನಿಖಾ ದಳ (CBI)ಗೆ ವಹಿಸಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಸತ್ಯಾಂಶವನ್ನು ರಾಜ್ಯದ ಜನತೆಯ ಮುಂದೆ ತರಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ UPSC ಮಾದರಿಯ ಪಾರದರ್ಶಕ, ತಂತ್ರಜ್ಞಾನ ಆಧಾರಿತ ಹಾಗೂ ಭ್ರಷ್ಟಾಚಾರ ಮುಕ್ತ ನೇಮಕಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಪರೀಕ್ಷಾ ಪ್ರಕ್ರಿಯೆಯಿಂದ ಫಲಿತಾಂಶದವರೆಗೆ ಸಂಪೂರ್ಣ ಪಾರದರ್ಶಕತೆ ಖಚಿತಪಡಿಸುವ ಸುಧಾರಣಾ ಕ್ರಮಗಳನ್ನು ಸರ್ಕಾರ ತಕ್ಷಣ ಕೈಗೊಳ್ಳಬೇಕು ಎಂದು ಹೇಳಿದರು.
ರಾಜ್ಯದ ಕಣ್ಣಿಲ್ಲದ ಸಂಗೀತ ಶಿಕ್ಷಕರು ಸೇರಿದಂತೆ ಅನೇಕ ವಿಕಲಚೇತನ ಅಭ್ಯರ್ಥಿಗಳು ವರ್ಷಗಳಿಂದ ನೇಮಕಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. 15ರಿಂದ 20 ವರ್ಷಗಳಾದರೂ ಅವರಿಗೆ ನ್ಯಾಯ ದೊರೆಯದಿರುವುದು ಸರ್ಕಾರದ ಆಡಳಿತ ವೈಫಲ್ಯದ ಸ್ಪಷ್ಟ ಉದಾಹರಣೆಯಾಗಿದೆ ಎಂದು ವಿಜಯೇಂದ್ರ ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಪ್ರಚಾರ ಮಾಡುತ್ತಿದೆ. ಆದರೆ ಯುವಕರಿಗೆ ಉದ್ಯೋಗದ ಗ್ಯಾರಂಟಿ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಸುಮಾರು 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡಲು ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ವಯೋಮಿತಿ ಮೀರುತ್ತಿರುವ ಉದ್ಯೋಗಾಕಾಂಕ್ಷಿಗಳು
ಲಕ್ಷಾಂತರ ಯುವಕರು ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ವರ್ಷಗಳ ಕಾಲ ಕಾಯುತ್ತಾ ವಯೋಮಿತಿಯನ್ನು ಮೀರುತ್ತಿದ್ದಾರೆ. ಅವರ ಬದುಕಿನ ಭದ್ರತೆ ಮತ್ತು ಭವಿಷ್ಯವನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅದನ್ನು ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.
ಬಿಜೆಪಿ ಕೇವಲ ಪ್ರತಿಭಟನೆಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿಯೂ ಯುವಕರ ಪರವಾಗಿ ನಿರಂತರವಾಗಿ ಧ್ವನಿ ಎತ್ತಿ, ಸರ್ಕಾರದಿಂದ ಸಮರ್ಪಕ ಉತ್ತರ ಹಾಗೂ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ವಿಜಯೇಂದ್ರ ಭರವಸೆ ನೀಡಿದರು.
ಈ ಹಿಂದೆ 2.5 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಹ ಅವಕಾಶ ನೀಡದೆ, ಹೈಕೋರ್ಟ್ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಸರ್ಕಾರದ ನಿರ್ಲಕ್ಷ್ಯ ಹಾಗೂ ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಬಣ್ಣಬಣ್ಣದ ಭರವಸೆಗಳಿಂದ ಯುವಕರ ಹೊಟ್ಟೆ ತುಂಬುವುದಿಲ್ಲ. ಅವರಿಗೆ ಉದ್ಯೋಗ, ನ್ಯಾಯ ಹಾಗೂ ಪಾರದರ್ಶಕ ನೇಮಕಾತಿ ವ್ಯವಸ್ಥೆ ಬೇಕಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಖಾಲಿ ಹುದ್ದೆಗಳ ಭರ್ತಿ, ನೇಮಕಾತಿ ಅಕ್ರಮಗಳ ತನಿಖೆ ಹಾಗೂ KPSCಯಲ್ಲಿ ಸಮಗ್ರ ಸುಧಾರಣೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿ, ವಿದ್ಯಾರ್ಥಿ ಹಾಗೂ ಅರ್ಹ ಅಭ್ಯರ್ಥಿಯ ಧ್ವನಿಯಾಗಿ ಭಾರತೀಯ ಜನತಾ ಪಕ್ಷದ ಎಲ್ಲಾ ಶಾಸಕರು ಮತ್ತು ನಾಯಕರು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಲಿದ್ದಾರೆ. ಯುವಕರಿಗೆ ನ್ಯಾಯ ದೊರೆಯುವವರೆಗೆ ಬಿಜೆಪಿ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಬಿ.ವೈ. ವಿಜಯೇಂದ್ರ ಅವರು ಸ್ಪಷ್ಟಪಡಿಸಿದರು
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ