Publish Date: Fri, 24 Jul 2026 (13:43 IST)
Updated Date: Fri, 24 Jul 2026 (13:49 IST)
ಬೆಂಗಳೂರು: ಸೂಕ್ತ ವ್ಯಕ್ತಿಗೆ ಸೂಕ್ತ ಸ್ಥಾನ ಕೊಡುವುದು ಸರಕಾರದ ಬದ್ಧತೆಯಾಗಿರಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಅವರು ಇಂದು ಜಿ.ಕೆ.ವಿ.ಕೆ. ಯಲ್ಲಿ ನಡೆಯುವ ಕೃಷಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಇಲ್ಲಿವರೆಗೆ ವೈದ್ಯಕೀಯ, ಎಂಜಿನಿಯರಿಂಗ್ ಸೀಟುಗಳು ಮಾರಾಟವಾಗುತ್ತಿದ್ದವು. ಈಗ ರೈತ ಮಕ್ಕಳ ಸೀಟುಗಳೂ ಮಾರಾಟವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಸರಕಾರವು ನಿಮಗೆ ದ್ರೋಹ ಮಾಡುವುದನ್ನು ಯಾರಿಂದಲೂ ಸಹಿಸಲಸಾಧ್ಯ ಎಂದು ತಿಳಿಸಿದರು.
ಸರಕಾರ ಅತಿ ಶೀಘ್ರವಾಗಿ ಧಾವಿಸಿ ಬಂದು ನಿಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು. ಸರಕಾರ ಬೆಂಗಳೂರಲ್ಲಿ ಇಲ್ಲದಿರುವುದು ವಿಪರ್ಯಾಸ ಎಂದು ಟೀಕಿಸಿದರು. ದೆಹಲಿಗೆ ಹೋದ ಸರಕಾರ ಯಾವತ್ತು ಬರುತ್ತದೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಿಮ್ಮ ಬೇಡಿಕೆಗಳ ಕುರಿತು ಪತ್ರದ ಮೂಲಕ ಗಮನ ಸೆಳೆಯುವೆ ಎಂದ ಅವರು, ಕೃಷಿ ಇಲಾಖೆ ಕಮೀಷನರ್‍ಗೂ ಮಾತನಾಡುವೆ ಎಂದು ತಿಳಿಸಿದರು. ನೀವು ಬೀದಿಯಲ್ಲಿ ಕುಳಿತುಕೊಳ್ಳುವುದನ್ನು ಸರಕಾರ ಹಗುರವಾಗಿ ಹಾಗೂ ಲಘುವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು.
ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಜಂತರ್ ಮಂಥರ್‍ನಲ್ಲಿ ಕುಳಿತಿದ್ದಾರಲ್ಲವೇ? ಎಂದು ಕೇಳಿದರಲ್ಲದೇ, ಈ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ ಎಂದು ಗಮನ ಸೆಳೆದರು. ಸಮಸ್ಯೆ ಪರಿಹಾರಗೊಂಡರೂ ಕಾಕ್ರೋಚ್‍ಗಳು ಅಲ್ಲೇ ಕುಳಿತಿವೆ. ಕಾಕ್ರೋಚ್‍ಗಳಿಗೆ ನಿಮ್ಮ ಸಮಸ್ಯೆ ಯಾಕೆ ಅರ್ಥವಾಗಿಲ್ಲ ಎಂದು ಪ್ರಶ್ನಿಸಿದರು. ಹೊಟ್ಟೆಪಾಡು ಮಾತ್ರ ನೋಡುವ ಕಾಕ್ರೋಚ್‍ಗಳಿಂದ ಯಾರಿಗಾದರೂ ಒಳ್ಳೇದಾದುದು ನೋಡಿದ್ದೀರಾ ಎಂದು ಕೇಳಿದರು.
ಕರ್ನಾಟಕದ ಸರಕಾರ ಕಾಕ್ರೋಚ್‍ಗಳ ಜೊತೆ ಜಂತರ್ ಮಂಥರ್‍ನಲ್ಲಿ ಕುಳಿತಿದೆ ಎಂದು ಆಕ್ಷೇಪಿಸಿದರು. ನಿಮ್ಮ ಬೇಡಿಕೆ ಕುರಿತು ಕುಲಪತಿ ಜೊತೆಗೂ ಮಾತನಾಡುವೆ ಎಂದರು. ಅನ್ಯಾಯ ಸರಿಪಡಿಸಲು ಕುಲಪತಿಗಳೂ ಒತ್ತಾಯಿಸಬೇಕಿತ್ತು ಎಂದು ತಿಳಿಸಿದರು. ಸರಕಾರ ಉದ್ಧಟತನ ಮುಂದುವರೆಸಿದರೆ ಮತ್ತೆ ಬರುವೆ ಎಂದು ಎಚ್ಚರಿಸಿದರು. ಒಗ್ಗಟ್ಟು ಎಂಬುದೇ ಶಕ್ತಿ. ಆ ಶಕ್ತಿ ಪ್ರದರ್ಶನ ಇಲ್ಲಿ ನಡೆದಿದೆ ಎಂದು ಹೇಳಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ