Select Your Language

Notifications

webdunia
webdunia
webdunia
webdunia

ಕಬ್ಬು ಬೆಳೆಗಾರರ ಸಂಧಾನದ ಬಳಿಕ ಸ್ವೀಟ್ ಹಂಚಿ ಸಂಭ್ರಮಿಸಿದ ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಶನಿವಾರ, 8 ನವೆಂಬರ್ 2025 (10:19 IST)
ಬೆಂಗಳೂರು: ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಂದು ನಡೆದ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರ ಮಹತ್ವದ ಸಭೆಯಲ್ಲಿ ತೆಗೆದುಕೊಂಡ ಮಹತ್ತರ ತೀರ್ಮಾನ ಆಗಿದ್ದು, ಇದನ್ನು ಸ್ವಾಗತಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್‍ನಲ್ಲಿ ಕಬ್ಬು ಬೆಳೆಗಾರರು, ರಾಜ್ಯ ರೈತ ಸಂಘ, ಹಸಿರು ಸೇನೆ ಶಾಂತಿಯುತ ಹೋರಾಟ ನಡೆಸಿದ್ದರು. ಇದು ಕಬ್ಬು ಬೆಳೆಗಾರರು, ರೈತ ಸಂಘದ ಹೋರಾಟಕ್ಕೆ ಸಂದ ಜಯ ಎಂದು ವಿಶ್ಲೇಷಿಸಿದರು.

ಮುಖ್ಯಮಂತ್ರಿಗಳು ಇವತ್ತು ಸಭೆ ನಡೆಸಿದ್ದು, ನನ್ನ ಪ್ರಕಾರ ಒಂದು ಅಥವಾ 2 ತಿಂಗಳ ಮೊದಲೇ ಈ ಸಭೆ ನಡೆಸಬೇಕಿತ್ತು. ರೈತರು ಬೀದಿಗಿಳಿದು ಹೋರಾಟ ಮಾಡಿ, ಆ ಹೋರಾಟವು ರಾಜ್ಯದ ಇತರ ಜಿಲ್ಲೆಗಳಿಗೆ ಹಬ್ಬುವ ಸಂದರ್ಭದಲ್ಲಿ ನಾವು ಕೂಡ ಹೋರಾಟದ ಸ್ಥಳಕ್ಕೆ ಭೇಟಿ ಕೊಟ್ಟು ಹೋರಾಟಕ್ಕೆ ಬೆಂಬಲ ನೀಡಿ, ತದನಂತರ ಎಚ್ಚೆತ್ತ ಸರಕಾರ, ಮುಖ್ಯಮಂತ್ರಿಗಳು ಈ ಸಭೆ ಕರೆದಿದ್ದರು ಎಂದು ವಿವರಿಸಿದರು. ಮುಖ್ಯಮಂತ್ರಿಗಳು ತುಮಕೂರಿನ ಎಲ್ಲ ಕಾರ್ಯಕ್ರಮಗಳನ್ನೂ ರದ್ದು ಮಾಡಿ ಈ ಸಭೆ ನಡೆಸಿದ್ದಾರೆ. ಸಭೆಯ ತೀರ್ಮಾನವನ್ನು ಸ್ವಾಗತಿಸುವೆ ಎಂದು ಹೇಳಿದರು.

ರಾಜಕೀಯ ಮಾಡಿಲ್ಲ; ಪ್ರಚೋದನೆ ಕೊಟ್ಟಿಲ್ಲ..
ಇವತ್ತಿನ ಸಭೆಯಲ್ಲಿ ಮುಖ್ಯಮಂತ್ರಿಗಳಲ್ಲದೆ, ಸಚಿವ ಸಂಪುಟದ ಸದಸ್ಯರು ನನ್ನ ಮೇಲೆ ಹರಿಹಾಯ್ದಿದ್ದಾರೆ. ವಿಜಯೇಂದ್ರ ಅವರು ಯಾಕೆ ಹೋರಾಟಕ್ಕೆ ಹೋಗಬೇಕಿತ್ತು? ರೈತರ ಪ್ರಚೋದನೆ ಮಾಡುವ ಕೆಲಸವನ್ನು ನಾವು ಮಾಡಿದ್ದಾಗಿ ಆರೋಪ ಮಾಡಿದ್ದಾರೆ. ಹೋರಾಟ ಪ್ರಾರಂಭವಾದ 5 ದಿನಗಳ ನಂತರ ನಾವು ಹೋಗಿದ್ದೇವೆ. ಹೋರಾಟ ಪ್ರಾರಂಭವಾದಾಗ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳದಿದ್ದಾಗ, 5 ದಿನ ಕಳೆದರೂ ಉಸ್ತುವಾರಿ ಸಚಿವರು, ಸಕ್ಕರೆ ಖಾತೆ ಸಚಿವರು, ಯಾವ ಸಚಿವರೂ ಹೋರಾಟದ ಕಡೆ ತಿರುಗಿ ನೋಡಲಿಲ್ಲವೋ ಆಗ ನಾವು ಅಲ್ಲಿಗೆ ತೆರಳಿ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಎಂದು ವಿಜಯೇಂದ್ರ ಅವರು ವಿವರಿಸಿದರು.

ರಾಜಕೀಯ ಮಾಡುವುದಾಗಲೀ, ರೈತರಿಗೆ ಪ್ರಚೋದನೆ ಮಾಡುವುದಾಗಲೀ ಮಾಡಿಲ್ಲ; ಹೋರಾಟಗಾರರ ಸಭೆಯಲ್ಲಿ ಅದನ್ನೇ ಹೇಳಿದ್ದೆ. ರೈತ ನಾಯಕ ಯಡಿಯೂರಪ್ಪ ಅವರ ಮಗನಾಗಿ, ರೈತರ ಬಗ್ಗೆ ಕಳಕಳಿಯಿಂದ ಬಂದಿದ್ದಾಗಿ ಹೇಳಿದ್ದೆ ಎಂದು ತಿಳಿಸಿದರು. ರಾಜಕೀಯ ಮಾಡಲು ಬಂದಿಲ್ಲ, ಸಕ್ಕರೆ ಕಾರ್ಖಾನೆಗಳ ಮಾಲೀಕರ ಪರವಾಗಿ ಬಂದಿಲ್ಲ ಎಂದಿದ್ದೇನೆ ಎಂದು ತಿಳಿಸಿದರು. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ರಾಜ್ಯ ಸರಕಾರವು 50 ರೂ. ಕೊಡಬೇಕಿದೆ. ಪ್ರತಿವರ್ಷ ಮೊಲಾಸಿಸ್, ಎಥೆನಾಲ್, ವಿದ್ಯುತ್ ಉತ್ಪಾದನೆಯ ಮೂಲಕ ರಾಜ್ಯ ಸರಕಾರಕ್ಕೆ 30 ಸಾವಿರ ಕೋಟಿ ಆದಾಯ ಬರುತ್ತದೆ. 50 ರೂ. ಕೊಡುವುದರಿಂದ ಅದರಲ್ಲಿ 300 ಕೋಟಿಯನ್ನಷ್ಟೇ ಸರಕಾರ ವಿನಿಯೋಗ ಮಾಡಬೇಕಿದೆ ಎಂದು ತಿಳಿಸಿದರು. ಅದು ಕೇವಲ ಶೇ 1ರಷ್ಟು ಮೊತ್ತದ ವಿನಿಯೋಗ ಎಂದು ಹೇಳಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಇದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ನಮಗೂ ಬೇಕು ಸ್ವಾತಂತ್ರ್ಯ: ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ನಾಯಿ ಪ್ರಿಯರ ಹೊಸ ಟ್ರೆಂಡ್