ಹಾವೇರಿ :-ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವು ಸಾಧಿಸಿದ್ದಾರೆ. ಮಾನೆ ಗೆಲುವಿನೊಂದಿಗೆ ಮುಖ್ಯಮಂತ್ರಿಯ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು, ಆ ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ ಸೋಲು ಕಂಡಿದ್ದಾರೆ. ಮಾನೆ ಗೆಲುವಿನ ಬಗ್ಗೆ ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.
ಶ್ರೀನಿವಾಸ ಮಾನೆ 87,113 ಮತಗಳನ್ನು ಗಳಿಸಿದರೆ, ಅವರಿಗೆ ಪೈಪೋಟಿ ನೀಡಿದ ಶಿವರಾಜ ಸಜ್ಜನ 79,515 ಮತಗಳನ್ನು ಗಳಿಸಿ ಸೋಲೊಪ್ಪಿಕೊಂಡರು. ಮಾನೆ 7,598 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿಯಾಝ್ ಶೇಖ್ 921 ಮತಗಳನ್ನಷ್ಟೇ ಗಳಿಸಲು ಶಕ್ತವಾಗಿದ್ದಾರೆ.
ಮತ ಎಣಿಕೆಯ ಆರಂಭದ ಸುತ್ತಿನಿಂದಲೂ ಅಲ್ಪ ಮುನ್ನಡೆಯೊಂದಿಗೆ ಮುಂದುವರಿದ ಶ್ರೀನಿವಾಸ ಮಾನೆ 2ನೇ ಸುತ್ತಿನಲ್ಲಿ ಮಾತ್ರ ಒಮ್ಮೆ ಶಿವರಾಜ ಸಜ್ಜನರ ಅವರಿಗೆ ಮುನ್ನಡೆ ಬಿಟ್ಟುಕೊಟ್ಟಿದ್ದರು. 6ನೇ ಸುತ್ತಿನ ಎಣಿಕೆಯ ವೇಳೆ ತಮ್ಮ ಮುನ್ನಡೆಯನ್ನು ಮೂರಂಕಿಯಿಂದ ನಾಲ್ಕಂಕಿಗೆ ಏರಿಸಿಕೊಂಡ ಮಾನೆ, ಬಳಿಕ ಎಲ್ಲ ಸುತ್ತಿನಲ್ಲೂ ಮುನ್ನಡೆಯನ್ನು ಕಾಯ್ದುಕೊಂಡು ಅಂತಿಮವಾಗಿ 7,598 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.
ಶ್ರೀನಿವಾಸ ಮಾನೆ 2018ರ ವಿಧಾನಸಭಾ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಹಾನಗಲ್ ನಲ್ಲಿ ಈ ಹಿಂದೆ ಬಿಜೆಪಿ ಶಾಸಕರಾಗಿದ್ದ ಸಿ.ಎಂ.ಉದಾಸಿ ನಿಧನರಾದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆದಿತ್ತು.