Photo Credit: Social media
ಬೆಂಗಳೂರು: ರಾಮಾಯಣದಲ್ಲಿ ಬರುವ ರಾಮ, ಲಕ್ಷ್ಮಣರು ಆದರ್ಶ ಪುರುಷರಲ್ಲ, ಕ್ರೂರಿಗಳು ಎಂದು ಬಂಡಾಯ ಸಾಹಿತಿ ಬಿಟಿ ಲಲಿತಾ ನಾಯಕ್ ಹೇಳಿದ್ದು ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ದಾವಣಗೆರೆಯ ಎವಿಕೆ ಕಾಲೇಜು ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ್ದ ಬಿಟಿ ಲಲಿತಾ ನಾಯಕ್ ಶ್ರೀರಾಮ ಚಂದ್ರ ಮತ್ತು ಲಕ್ಷ್ಮಣರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶೂರ್ಪನಖಿಯ ಮೂಗು ಕತ್ತರಿಸಿದ ಲಕ್ಷ್ಮಣ, ಸೀತೆಯನ್ನು ಶಂಕಿಸಿ ವನವಾಸಕ್ಕೆ ಕಳುಹಿಸಿದ ರಾಮ ಆದರ್ಶರಾಗಲು ಸಾಧ್ಯವಿಲ್ಲ. ಸೀತೆಯನ್ನು ಅಪಹರಿಸಿ ಅವಳ ಜೀವನ ಹಾಳು ಮಾಡಿದ ರಾವಣ ಕೂಡಾ ಕ್ರೂರಿ. ಆದರೂ ಅವರನ್ನು ಆದರ್ಶ ಪುರುಷರು ಎಂಬಂತೆ ಬಿಂಬಿಸಲಾಗಿದೆ ಎಂದು ಲಲಿತಾ ನಾಯಕ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ ರಾಮಾಯಣ, ಮಹಾಭಾರತದ ಬಗ್ಗೆಯೂ ಅವರು ಹೀಗೆಳೆದಿದ್ದಾರೆ. ಇದು ಕೂಡಾ ಅಂತಹದ್ದೇ ಸಾಹಿತ್ಯ. ಶಾಂತಿಯ ಪ್ರತೀಕವಾಗಿರುವ ಬುದ್ಧನ ಕೈಯಲ್ಲಿ ಕತ್ತಿ ಗುರಾಣಿ, ಖಡ್ಗ ಏನೂ ಇಲ್ಲ. ಆದರೆ ಶ್ರೀರಾಮನ ಕೈಗೆ ಬಿಲ್ಲು, ಬಾಣ ನೀಡಲಾಗಿದೆ ಎಂದಿದ್ದಾರೆ.
ಅವರ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅದಕ್ಕಿಂತಲೂ ಕ್ರೂರಿಗಳು ನಿಮ್ಮಂತಹ ಚಿಂತನೆಯುಳ್ಳವರದ್ದು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ರಾಮಾಯಣವೇ ಸುಳ್ಳು ಎನ್ನುವ ನೀವು ರಾಮ ಕ್ರೂರಿ ಎನ್ನಲು ಹೇಗೆ ಸಾಧ್ಯ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.