ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಅಂತಿಮ ಹಂತದಲ್ಲಿ ಉಳಿದಿರುವ ಇಬ್ಬರು ಮುಖಂಡರಲ್ಲಿ ಒಬ್ಬರಾಗಿರುವ ಮಾಜಿ ಸಚಿವ ರಿಷಿ ಸುನಾಕ್, ಈ ರೇಸ್‌ನಲ್ಲಿ ತಾನು ಬಲಿಪಶು ಆಗುವುದರಲ್ಲಿ ತನಗೆ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.
ಪ್ರಧಾನಿ ಬೋರಿಸ್ ಜಾನ್ಸನ್ ಕಾರ್ಯವೈಖರಿಯನ್ನು ಟೀಕಿಸಿ ಅವರ ಸಂಪುಟದಲ್ಲಿ ವಿತ್ತಸಚಿವರಾಗಿದ್ದ ಸುನಾಕ್ ರಾಜೀನಾಮೆ ಸಲ್ಲಿಸಿದ್ದರು.
ಸಚಿವರ ಸರಣಿ ರಾಜೀನಾಮೆ ಜಾನ್ಸನ್ ರಾಜೀನಾಮೆಗೆ ಕಾರಣವಾಗಿತ್ತು. ಈ ಕಾರಣದಿಂದ ಪಕ್ಷದೊಳಗಿನ ಜಾನ್ಸನ್ ಬೆಂಬಲಿಗರು ತನ್ನನ್ನು ವಿರೋಧಿಸಬಹುದು ಎಂದು ಪರೋಕ್ಷವಾಗಿ ಸುನಾಕ್ ಹೇಳಿದ್ದಾರೆ.
ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾಗಿರುವ ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಹುಹಂತದ ಮತದಾನ ಪ್ರಕ್ರಿಯೆಯ ಇದುವರೆಗಿನ ಎಲ್ಲಾ ಹಂತಗಳಲ್ಲೂ ರಿಷಿ ಸುನಾಕ್ ಮುನ್ನಡೆ ಕಾಯ್ದುಕೊಂಡು ಬಂದಿದ್ದಾರೆ. ಅಂತಿಮ ಹಂತದಲ್ಲಿ ಸುನಾಕ್ ಮತ್ತು ಮಾಜಿ ಸಚಿವೆ ಲಿರ್ ಟ್ರೂಸ್ ಮಧ್ಯೆ ಸ್ಪರ್ಧೆ ನಡೆಯಲಿದ್ದು ಸೆಪ್ಟಂಬರ್ 5ರಂದು ಫಲಿತಾಂಶ ಘೋಷಿಸಲಾಗುವುದು. ಮುಂದಿನ ಹಂತದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಸುಮಾರು 2 ಲಕ್ಷ ಸದಸ್ಯರು ಮತದಾನ ಮಾಡಲಿದ್ದಾರೆ. ಗುರುವಾರ ನಡೆದ ಮತದಾನ ಪೂರ್ವ ಸಮೀಕ್ಷೆಯಲ್ಲಿ ಲಿರ್ ಅವರು ಸುನಾಕ್ ವಿರುದ್ಧ 24 ಅಂಕಗಳ ಮುನ್ನಡೆ ಸಾಧಿಸಿರುವುದಾಗಿ ವರದಿಯಾಗಿದೆ.