ಛತ್ತೀಸ್‌ಗಢದ ಟಿಕಾಯತ್‌ಗಂಜ್‌ನಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಶಿಕ್ಷಕಿಯೊಬ್ಬಳು ಕಂಠಪೂರ್ತಿ ಕುಡಿದು ಶಾಲೆಗೆ ಬಂದಿದ್ದಾಳೆ. ಮಕ್ಕಳಿಗೆ ಪಾಠ ಹೇಳುವಷ್ಟು ತ್ರಾಣವೇ ಅವಳಿಗೆ ಇರಲಿಲ್ಲ.
ಅದೇ ಸಮಯದಲ್ಲಿ ಶಿಕ್ಷಣಾಧಿಕಾರಿ ಶಾಲೆಯ ಪರಿಶೀಲನೆಗಾಗಿ ಸ್ಥಳಕ್ಕೆ ಬಂದರು. ಕುಡಿದು ತರಗತಿಯಲ್ಲಿ ಮಲಗಿದ್ದ ಶಿಕ್ಷಕಿಯನ್ನು ನೋಡಿ ದಂಗಾಗಿ ಹೋಗಿದ್ದಾರೆ. ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದ್ರೂ ಸಾಧ್ಯವಾಗಲೇ ಇಲ್ಲ. ಬೆಳಗ್ಗೆ 11 ಗಂಟೆ ಸುಮಾರಿಗೆ ಶಿಕ್ಷಣಾಧಿಕಾರಿ ಶಾಲೆಗೆ ಆಗಮಿಸಿದ್ದರು.
ಶಿಕ್ಷಕಿ ನೆಲದ ಮೇಲೆ ಬಿದ್ದಿರುವುದನ್ನು ನೋಡಿ ಆಕೆಯ ಆರೋಗ್ಯ ಹದಗೆಟ್ಟಿರಬಹುದು ಎಂದುಕೊಂಡಿದ್ದಾರೆ. ಈ ಬಗ್ಗೆ ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ವಿಚಾರಿಸಿದ್ದಾರೆ. ಆಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಶಿಕ್ಷಕಿ ಮದ್ಯದ ಅಮಲಿನಲ್ಲಿ ಆ ರೀತಿ ಮಲಗಿರೋದಾಗಿ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ಟಿಕಾಯತ್‌ಗಂಜ್‌ನ ಈ ಪ್ರಾಥಮಿಕ ಶಾಲೆ ಛತ್ತೀಸ್‌ಗಢದ ರಾಜಧಾನಿ ರಾಯಪುರದಿಂದ ಸುಮಾರು 430 ಕಿಮೀ ದೂರದಲ್ಲಿದೆ. ಈ ಪ್ರಾಥಮಿಕ ಶಾಲೆಯಲ್ಲಿ 54 ಮಕ್ಕಳು ಓದುತ್ತಿದ್ದಾರೆ.
ಶಿಕ್ಷಕರ ಸ್ಥಿತಿಯನ್ನು ನೋಡಿದ ಶಿಕ್ಷಣಾಧಿಕಾರಿ ಕೂಡಲೇ ಎಸ್ಪಿಗೆ ಮಾಹಿತಿ ನೀಡಿದ್ರು. ಶಿಕ್ಷಕರ ವೈದ್ಯಕೀಯ ಪರೀಕ್ಷೆಗೆ ಸಹಾಯ ಮಾಡುವಂತೆ ಕೋರಿದರು. ನಂತರ ಇಬ್ಬರು ಮಹಿಳಾ ಪೇದೆಗಳು ಸ್ಥಳಕ್ಕಾಗಮಿಸಿ ಶಿಕ್ಷಕಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆರೋಪಿ ಶಿಕ್ಷಕಿ ಕಳೆದ ಹಲವು ದಿನಗಳಿಂದ ಕುಡಿದ ಮತ್ತಿನಲ್ಲಿ ಶಾಲೆಗೆ ಬರುತ್ತಿರುವುದು ಮಕ್ಕಳ ವಿಚಾರಣೆ ವೇಳೆ ತಿಳಿದು ಬಂದಿದೆ. ಕೂಡಲೇ ಈ ಚಟ ಬಿಡುವಂತೆ ಶಿಕ್ಷಕರಿಗೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ.