Publish Date: Sat, 09 Apr 2022 (17:15 IST)
Updated Date: Sat, 09 Apr 2022 (17:24 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಶನಿವಾರ ಮಧ್ಯಾಹ್ನ 12.40ರ ಸುಮಾರಿಗೆ ನಡೆದಿದೆ.
ಸರ್ಕಲ್‌ನಲ್ಲಿ ಸಂಚರಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೆಜಿಸ್ಟಿಕ್‌ನಿಂದ ಹೊಸಕೆರೆಹಳ್ಳಿ ಮಾರ್ಗವಾಗಿ ಚಲಿಸುತ್ತಿದ್ದ ಬಸ್ ಕೆ.ಆರ್. ಸರ್ಕಲ್ ತಲುಪುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ, ಕೂಡಲೇ ಬಸ್ ನಿಲ್ಲಿಸಿದ್ದಾನೆ.
ಬಸ್ ಮೇನ್ ಡೋರ್ ಲಾಕ್ ಆಗಿದ್ದರಿಂದ ಬಸ್‌ನ ತುರ್ತು ನಿರ್ಗಮನ ಮೂಲಕ ಸುಮಾರು ಮೂವತ್ತು ಪ್ರಯಾಣಿಕರನ್ನು ಯಾವುದೇ ಅಪಾಯಗಳಿಲ್ಲದೆ ಹೊರಗೆ ಕರೆತರಲಾಗಿದೆ.