Publish Date: Tue, 06 Jan 2026 (10:02 IST)
Updated Date: Tue, 06 Jan 2026 (10:05 IST)
ಬೆಂಗಳೂರು: ಕೇಂದ್ರ ಸಚಿವ ವಿ ಸೋಮಣ್ಣ ಮತ್ತು ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ನಡುವೆ ನಡೆದ ಜಟಾಪಟಿ ನಡುವೆ ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿ ಎಸೆದು ಗೂಂಡಾಗಿರಿ ಮಾಡಿದ್ದಾರೆ. ಇದರ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಕೊಪ್ಪಳದ ಹಿಟ್ನಾಳ ಬಳಿಯ ರೈಲ್ವೇ ಮೇಲ್ಸೇತುವೆ ಶಂಕು ಸ್ಥಾಪನೆ ವೇಳೆ ವೇದಿಕೆಯ ಸ್ಕ್ರೀನ್ ನಲ್ಲಿ ರಾಜ್ಯ ಸರ್ಕಾರದ ಜನಪ್ರತಿನಿಧಿಗಳ ಹೆಸರು ಇಲ್ಲದೇ ಇರುವುದಕ್ಕೆ ರೈಲ್ವೇ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಜೊತೆ ಶಿವರಾಜ್ ತಂಗಡಗಿ ಜಡಾಪಟಿ ನಡೆಸಿದ್ದಾರೆ. ಅವರಿಗೆ ಕಾಂಗ್ರೆಸ್ ಕಾರ್ಯಕರ್ತರೂ ಸಾಥ್ ನೀಡಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿ ಸೋಮಣ್ಣ ಮೇಲೆ ಕುರ್ಚಿ ಎಸೆದು ದುಂಡಾವರ್ತನೆ ತೋರಿದ್ದಾರೆ. ಜಾಗ ಕೊಡಕ್ಕೆ ನಾವು ಬೇಕು, ಹೆಸರು ಹಾಕಕ್ಕೆ ಬೇಡ್ವಾ ಎಂದು ಕಾಂಗ್ರೆಸ್ ಕಾರ್ಯಕರ್ತರು ವಿ ಸೋಮಣ್ಣ ಅವರನ್ನು ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ವರ್ತನೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದೆ ಎಂದಿದೆ. ಕೇಂದ್ರ ಸಚಿವರು ಎನ್ನುವ ಕನಿಷ್ಠ ಗೌರವವೂ ಇಲ್ಲದೇ ಕುರ್ಚಿ ಎಸೆಯುವಷ್ಟು ಹೀನ ಮಟ್ಟಕ್ಕಿಳಿದಿದೆ ಎಂದು ಬಿಜೆಪಿ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.