ಬೆಂಗಳೂರು: ಕಸದ ಶುಲ್ಕ ಸಂಬಂಧ ಬಿಬಿಎಂಪಿ ಹೊರಡಿಸಿದ ಆಜ್ಞೆಯು ದಿಗ್ಭ್ರಮೆ ಮೂಡಿಸುವಂತಿದೆ ಹಾಗೂ ತೀವ್ರ ವಿದ್ಯುತ್ ಆಘಾತದಂತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಬ್ದಾರಿ ಇಲ್ಲದೆ, ಮನ ಬಂದಂತೆ ಜನರ ಮೇಲೆ 2025-26ನೇ ಸಾಲಿಗೆ ತಮ್ಮ ಆಸ್ತಿ ತೆರಿಗೆ ಜೊತೆಯಲ್ಲಿ ಬಳಕೆದಾರರ ತ್ಯಾಜ್ಯ ಶುಲ್ಕ ಮತ್ತು ಸುಂಕವನ್ನು ವಿಧಿಸಲಾಗುತ್ತಿದೆ ಎಂದು ಟೀಕಿಸಿದರು. ಎಲ್ಲರೂ ಜಗ್ಗುವಂಥ ಮಟ್ಟದಷ್ಟು ಶುಲ್ಕ ಹಾಕಿದ್ದಾರೆ ಎಂದು ಆರೋಪಿಸಿದರು.
ದೊಡ್ಡ ಬರೆಯನ್ನು, ದೊಡ್ಡ ಮೊತ್ತವನ್ನು ವಸತಿಗಳ ಮೇಲೆ, ಹೋಟೆಲ್ ಮತ್ತಿತರ ವಾಣಿಜ್ಯ ಸಂಸ್ಥೆಗಳ ಮೇಲೆ ಹಾಕಿದ್ದಾರೆ. 5-4-2025ರಂದು ಹೊರಡಿಸಿದ ಈ ಸುತ್ತೋಲೆ ಕಾನೂನಿನ ಪರಿಜ್ಞಾನವಿಲ್ಲದೆ ಮಾಡಿದಂತಿದೆ. ವಸತಿಗಳ ಮೇಲೆ ಜಾಗದ ಬದಲಾಗಿ ವಸತಿಯ ವಿಸ್ತೀರ್ಣವನ್ನು ಆಧರಿಸಿ ಸೆಸ್ ಶುಲ್ಕದ ಜೊತೆಗೆ ಬಳಕೆದಾರರ ತೆರಿಗೆ ವಿಧಿಸಿದ್ದಾರೆ ಎಂದು ತಿಳಿಸಿದರು.
600 ಚದರ ಅಡಿ ಮೇಲಿರುವವರಿಗೆ 10 ರೂ, 1000 ದಿಂದ 2 ಸಾವಿರಕ್ಕೆ 100 ರೂ. ತಿಂಗಳಿಗೆ ವಿಧಿಸಲಿದ್ದಾರೆ. ತಿಂಗಳು ಮತ್ತು ವರ್ಷ ಎಂದು ನಿನ್ನೆ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಹೇಳಿದರು. ತ್ಯಾಜ್ಯ ಶುಲ್ಕ ಪ್ರತಿ ತಿಂಗಳ ಬದಲಾಗಿ ಒಮ್ಮೆಲೆ ಮುಂಚಿತವಾಗಿಯೇ ಸಂಗ್ರಹಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಖಾಲಿ ನಿವೇಶನಕ್ಕೆ ಚದರ ಅಡಿಗೆ ವರ್ಷಕ್ಕೆ 60 ಪೈಸೆ ವಿಧಿಸುತ್ತಾರೆ. ಪದ್ಮನಾಭ ರೆಡ್ಡಿ ಅವರ ಖಾಲಿ ನಿವೇಶನ ಇದೆ ಎಂದುಕೊಳ್ಳೋಣ. ಖಾಲಿ ಜಾಗ 1 ಲಕ್ಷದ 10 ಸಾವಿರ ಅಡಿಗೆ 2024-25ರಲ್ಲಿ ಅವರ ಪ್ರಾಪರ್ಟಿ ಟ್ಯಾಕ್ಸ್ 38,105 ರೂ. ಇತ್ತು. ಅವರಿಗೆ 2025-26ರಲ್ಲಿ ವಿನಾಯಿತಿ ಬಳಿಕ ಆಸ್ತಿ ತೆರಿಗೆ 38,105 ರೂ. ಇದೆ. ವಿನಾಯಿತಿ ರಹಿತವಾಗಿ 40110 ರೂ. ಇದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ವಿವರಿಸಿದರು. ಇವರಿಗೆ ಸಾಲಿಡ್ ವೇಸ್ಟ್ ಯೂಸರ್ ಚಾರ್ಜ್ ರೂಪದಲ್ಲಿ 66,320 ರೂ. ವಿಧಿಸಿದ್ದಾರೆ ಎಂದು ತಿಳಿಸಿದರು.
ವಸತಿಯೇತರ ಉದ್ದೇಶ ಅಥವಾ ವಾಣಿಜ್ಯ ಉದ್ದೇಶದ ಬಳಕೆಗೆ ಸಂಬಂಧಿಸಿ, ಬಾಡಿಗೆ ಕಟ್ಟಡಕ್ಕೆ 1 ಸಾವಿರ ಚದರ ಅಡಿ ಮೇಲಿದ್ದರೆ ವರ್ಷಕ್ಕೆ 2 ಸಾವಿರ ರೂ., ಸಾವಿರದಿಂದ 2 ಸಾವಿರ ಚದರ ಅಡಿಗೆ 6 ಸಾವಿರ ರೂ., 2 ಸಾವಿರದಿಂದ 5 ಸಾವಿರ ಚದರ ಅಡಿಗೆ 14 ಸಾವಿರ ರೂ., 5 ಸಾವಿರದಿಂದ 10 ಸಾವಿರ ಇದ್ದಲ್ಲಿ 38 ಸಾವಿರ ರೂ., 10 ಸಾವಿರದಿಂದ 20 ಸಾವಿರ ಚದರ ಅಡಿಗೆ 70 ಸಾವಿರ ರೂ., ಗರಿಷ್ಠ 5 ಲಕ್ಷ ಚದರಡಿಗಿಂತ ಹೆಚ್ಚಿದ್ದರೆ 35 ಲಕ್ಷ ರೂ. ವಿಧಿಸುತ್ತಾರೆ ಎಂದು ಮಾಹಿತಿ ನೀಡಿದರು. ಇದು ತ್ಯಾಜ್ಯ ಬಳಕೆದಾರರ ಶುಲ್ಕವಾಗಿದ್ದು, ಸೆಸ್ ಅನ್ನು ಒಳಗೊಂಡಿಲ್ಲ ಎಂದು ತಿಳಿಸಿದರು.