ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕುರ್ಚಿಗಾಗಿ ಗುದ್ದಾಟ ನಡೆಯುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮನೆಗೆ ಆರಾಧ್ಯ ಅಜ್ಜಯ್ಯನ ಗದ್ದುಗೆ ಪ್ರವೇಶವಾಗಿದೆ.
ಸದ್ಯ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಶೀತಲ ಸಮರ ತೀವ್ರಗೊಂಡಿದೆ. ಸಿದ್ದರಾಮಯ್ಯ ನಾನೇ ಮುಂದಿನ ಬಜೆಟ್ ಮಂಡಿಸುತ್ತೇನೆ ಎನ್ನುವ ಮೂಲಕ ಸಿಎಂ ಸ್ಥಾನದಿಂದ ಇಳಿಯುವುದಿಲ್ಲ ಎನ್ನುವ ಸೂಚನೆಯನ್ನು ನೀಡುತ್ತಿದ್ದಾರೆ.
ಮತ್ತೊಂದು ಕಡೆ ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಜತೆ ಸಭೆ ನಡೆಸುತ್ತಾರೆ, ದೇವರ ಮೊರೆ ಹೋಗುತ್ತಾರೆ, ಮತ್ತೊಂದೆಡೆ ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎನ್ನುತ್ತಾ ಶಾಸಕರನ್ನು ಭೇಟಿಯಾಗುತ್ತಾರೆ. ಒಟ್ಟಾರೆ ಎರಡೂವರೆ ವರ್ಷ ತುಂಬಿದ ಕಾಂಗ್ರೆಸ್ ಸರ್ಕಾರದಲ್ಲಿ ಇದೀಗ ಸಿಎಂ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಯುತ್ತಿದೆ.
ಕಳೆದ ಕೆಲ ತಿಂಗಳಿನಿಂದ ಡಿಕೆ ಶಿವಕುಮಾರ್ ಅವರು ದೇವರ ಮೊರೆ ಹೋಗುತ್ತಲೇ ಇದ್ದಾರೆ. ಈಚೆಗೆ ಕಾಶಿಯಿಂದ ನಾಗ ಸಾಧುಗಳು ಆಶೀರ್ವಾದಿಸಿದ ಬೆನ್ನಲ್ಲೇ ʻಹಂದನ ಕೆರೆ ಅಜ್ಜಯ್ಯನ ಗದ್ದುಗೆʼ ಡಿಕೆಶಿ ಮನೆಗೆ ಆಗಮಿಸಿದೆ. ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಅಜ್ಜಯ್ಯನ ಗದ್ದುಗೆ ಕರೆಸಿ ಕುಟುಂಬ ಸಮೇತರಾಗಿ ಪೂಜೆ ನೆರವೇರಿಸಿದ್ದಾರೆ.
ಕೆಲ ದಿನಗಳ ಹಿಂದೆ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಬಂದ ನಾಗ ಸಾಧುಗಳು ಡಿಕೆಶಿ ತಲೆ ಮೇಲೆ ಕೈ ಇಟ್ಟು ಸಿಎಂ ಆಗಲೆಂದು ಆಶೀರ್ವಾದ ಮಾಡಿದ್ದರು.
ಇದಕ್ಕೂ ಮುನ್ನಾ ದಿನ ಅರಸೀಕೆರೆ ತಾಲ್ಲೂಕಿನ, ಯಾದಪುರದಲ್ಲಿರುವ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಅವರ ಉತ್ಸವಮೂರ್ತಿಯನ್ನ ಬೆಂಗಳೂರಿನ ನಿವಾಸಕ್ಕೆ ಕರೆಸಿಕೊಂಡು ಕುಟುಂಬಸ್ಥರೊಂದಿಗೆ ಸಂಕಲ್ಪ ಪೂಜೆ ಸಲ್ಲಿಸಿದ್ದರು.