ಧಾರವಾಡ: ವಿಜಯಪುರದಲ್ಲಿ ರೈತರ ಜಮೀನು ವಶಪಡಿಸಿಕೊಳ್ಳಲು ವಕ್ಫ್ ಬೋರ್ಡ್ ನೋಟಿಸ್ ನೀಡಿದ ವಿಚಾರ ಭುಗಿಲೆದ್ದಿರುವ ಬೆನ್ನಲ್ಲೇ ಈಗ ಧಾರವಾಡದಲ್ಲೂ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ.
ಧಾರವಾಡದ ಉಪ್ಪಿನ ಬೆಟಗೇರಿ ಗ್ರಾಮದ ಕೆಲವು ರೈತರ ಜಮೀನು ಪಹಣಿ ಪತ್ರದಲ್ಲಿ ಆಸ್ತಿ ವಕ್ಫ್ ಬೋರ್ಡ್ ಗೆ ಒಳಪಟ್ಟಿದೆ ಎಂದು ನಮೂದಾಗಿದ್ದು ಇದನ್ನು ತಿದ್ದುಪಡಿ ಮಾಡಲು ಈಗ ಹೆಣಗಾಡುತ್ತಿದ್ದಾರೆ. ವಿಜಯಪುರದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಧಾರವಾಡದ ಪ್ರಕರಣ ಬೆಳಕಿಗೆ ಬಂದಿದೆ.
ಪಹಣಿ ಪತ್ರದಲ್ಲಿ 2021, 2022 ಮತ್ತು 2023 ರಲ್ಲಿ ರೈತರ ಜಮೀನು ವಕ್ಫ್ ಬೋರ್ಡ್ ಗೆ ಸೇರಿದ್ದು ಎಂದು ನಮೂದಾಗಿದೆ. ಇದೇ ಆಸ್ತಿ ಪಹಣಿಯನ್ನು 2018, 2019 ರಲ್ಲಿ ನೋಡಿದ್ದಾಗ ವಕ್ಫ್ ಬೋರ್ಡ್ ಗೆ ಸೇರಿದ್ದು ಎಂದು ಇರಲಿಲ್ಲ. ಆದರೆ ಈಗ ದಿಡೀರ್ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಇಲ್ಲಿ ವರ್ಷಗಳಿಂದಲೂ ಉಳುಮೆ ಮಾಡುತ್ತಾ ಬಂದಿರುವ ರೈತರ ಆತಂಕಕ್ಕೆ ಕಾರಣವಾಗಿದೆ.
ಉಪ್ಪಿನ ಬೆಟಗೇರಿ ಗ್ರಾಮದ ರೈತರ ಈ ಜಮೀನುಗಳು ಅವರು ಯಾರಿಂದಲೂ ದಾನವಾಗಿ ಪಡೆದಿದ್ದಲ್ಲ. ಪಿತ್ರಾರ್ಜಿತವಾಗಿ ಬಂದ ಆಸ್ತಿ. ಆದರೂ ಜಮೀನು ವಕ್ಫ್ ಗೆ ಸೇರಿದೆ ಎಂದು ನಮೂದಾಗಿದ್ದು, ಇದನ್ನು ತಿದ್ದುಪಡಿ ಮಾಡಿಸಲು ಕಚೇರಿಗಳಿಗೆ ಅಲೆದಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.