ಮರ್ಯಾದೆಗೆ ಅಂಜಿ ಕೆಂಗೇರಿ- ಹೆಜ್ಜಾಲ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ 25 ವರ್ಷದ ವೈದ್ಯನ ಸಾವಿಗೆ ಬೆಂಗಳೂರು ಸಿಟಿ ರೈಲ್ವೆ ಪೊಲೀಸರು ನ್ಯಾಯ ಕೊಡಿಸಿದ್ದಾರೆ. ಆದರೆ ಮಗನನ್ನು ಕಳೆದುಕೊಂಡ ನೋವು, ಸಮಾಜದ ಎದುರು ಬದುಕಲಾಗದೇ ಮೃತ ವೈದ್ಯನ ಹೆತ್ತವರು ಮನೆಯನ್ನೇ ಮಾರಿ ಜಾಗ ಖಾಲಿ ಮಾಡುತ್ತಿದ್ದಾರೆ.
ಕೆಂಗೇರಿ ಹೆಜ್ಜಾಲ ರೈಲು ಮಾರ್ಗದಲ್ಲಿ 25 ವರ್ಷ ವಯಸ್ಸಿನ ಯುವಕನ ಮೃತದೇಹ ಸಿಕ್ಕಿತ್ತು. ಪರಿಶೀಲನೆ ನಡೆಸಿದಾಗ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ್ದ ಎಂಬಿಬಿಎಸ್ ವಿದ್ಯಾರ್ಥಿ ಎಂಬ ವಿಚಾರ ಬಯಲಾಗಿತ್ತು. ಈ ಕುರಿತು ಬೆಂಗಳೂರು ಸಿಟಿ ರೈಲ್ವೇ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ತನಿಖೆ ನಡೆಸಿದಾಗ, ವೈದ್ಯ ಒಂದು ಎಡವಟ್ಟು ಮಾಡಿಕೊಂಡಿದ್ದ. ನ್ಯೂಡ್ ಕಾಲ್ ಆಸೆಗೆ ಬಿದ್ದಿದ್ದ ಈ ವೈದ್ಯ ವಿದ್ಯಾರ್ಥಿ ಯನ್ನೇ ಸೈಬರ್ ವಂಚಕನೊಬ್ಬ ಬೆತ್ತಲೆ ಮಾಡಿ ವಿಡಿಯೋ ಮಾಡಿದ್ದ. ಯುವತಿ ಸೋಗಿನಲ್ಲಿ ಕರೆ ಮಾಡಿದ್ದ ವೈದ್ಯ ವಿದ್ಯಾರ್ಥಿಯ ಬೆತ್ತಲೆ ವಿಡಿಯೋ ಮಾಡಿಕೊಂಡಿದ್ದ ಸೈಬರ್ ವಂಚಕ ಹಣ ನೀಡುವಂತೆ ಪೀಡಿಸಿದ್ದ. ಆರಂಭದಲ್ಲಿ ಒಂದಷ್ಟು ಹಣ ಪಾವತಿಸಿದ್ದ ವಿದ್ಯಾರ್ಥಿ ಆ ಬಳಿಕ ನಿರಾಕರಣೆ ಮಾಡಿದ್ದ. ಅಂತಿಮವಾಗಿ 67 ಸಾವಿರ ರೂ. ಹಣ ನೀಡದಿದ್ದರೆ ನಿನ್ನ ವಿಡಿಯೋ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದ. ಹಣ ನೀಡದ ಕಾರಣ ವೈದ್ಯನ ಸಂಪರ್ಕ ಸಂಖ್ಯೆ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಬೆತ್ತಲೆ ವಿಡಿಯೋ ಬಿಡುಗಡೆ ಆಗಿತ್ತು.
ಇದರಿಂದ ಮರ್ಯಾದೆಗೆ ಅಂಜಿ ಕೆಂಗೇರಿ- ಹೆಜ್ಜಾಲ ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೂ ಮುನ್ನ ತನ್ನ ಐಪೋನ್‌ನಲ್ಲಿ ಸಾವಿನ ಎಲ್ಲಾ ವಿಚಾರವನ್ನು ಬರೆದಿಟ್ಟಿದ್ದ. ಐಪೋನ್ ಕರೆ ಜಾಡು ಹಿಡಿದು ತನಿಖೆ ನಡೆಸಿದ ಸಿಟಿ ರೈಲ್ವೇ ಪೊಲೀಸರು, ಭೋಪಾಲ್‌ನಲ್ಲಿರುವ ವಂಚಕನನ್ನು ಬಂಧಿಸಿದ್ದಾರೆ. ಆತನನ್ನು ಬಂಧಿಸುವ ವೇಳೆ ಆತನ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಭಯ ಬಿದ್ದು ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.