ಚಿತ್ತಾಪುರ: ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ತೀವ್ರ ಗಮನ ಸೆಳೆದಿದ್ದ ಮತ್ತು ಚರ್ಚೆಗೆ ಕಾರಣವಾಗಿದ್ದ ಆರ್‌ಎಸ್‌ಎಸ್ ಪಥಸಂಚಲನವು ಭಾನುವಾರ ಭಾರೀ ಪೊಲೀಸ್ ಬಿಗಿ ಭದ್ರತೆ ನಡೆ ಶಾಂತಿಯುತವಾಗಿ ಇಂದು ಸಂಪನ್ನಗೊಂಡಿತು.
ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರ ಪಟ್ಟಣದಲ್ಲಿ 300 ಆರ್‌ಎಸ್‌ಎಸ್ ಗಣವೇಷಧಾರಿಗಳು ಪೊಲೀಸರ ಸರ್ಪಗಾವಲಿನ ನಡುವೆ ತನ್ನ 'ಸಂಘದ ಬಲ' ಪ್ರದರ್ಶನ ಮಾಡಿದರು.
ಇನ್ನೂ 50 ಘೋಷ್ ವಾದಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಎಲ್ಲರೂ ತಮ್ಮ ಮಾಹಿತಿಯನ್ನು ನೀಡಿ ಪಥಸಂಚಲನದಲ್ಲಿ ಪಾಲ್ಗೊಂಡರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಆರ್‌ಎಸ್ಎಸ್ ಪಥ ಸಂಚಲನ ವೀಕ್ಷಿಸಲು ಚಿತ್ತಾಪುರದ ರಸ್ತೆಗಳ ಇಕ್ಕೆಲಗಳಲ್ಲಿ ಜನತೆ ಕಿಕ್ಕಿರಿದು ಸೇರಿದ್ದರು.
ನೆರೆದಿದ್ದ ನೂರಾರು ಮಂದಿ 'ಭಾರತ ಮಾತಾಕೀ ಜೈ', 'ವಂದೇ ಮಾತರಂ' 'ಜೈ ಶ್ರೀರಾಮ', 'ಜೈ ಭವಾನಿ, ಜೈ ಶಿವಾಜಿ' ಎಂದು ಘೋಷಣೆ ಮೊಳಗಿಸಿದರು.