ಬೆಂಗಳೂರು: ನನಗೆ ಸರ್ಕಾರ ನೀಡಿದ್ದ ಬೆಂಗಾವಲು ರಕ್ಷಣೆಯನ್ನು ವಾಪಸ್ ಪಡೆದಿದ್ದು, ನನಗೇನಾದರೆ ರಾಜ್ಯ ಸರ್ಕಾರ ಮತ್ತು ಪ್ರಿಯಾಂಕ್ ಖರ್ಗೆ ಅವರೇ ಹೊಣೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಎಚ್ಚರಿಸಿದ್ದಾರೆ.
ನಮ್ಮಲ್ಲಿ ಭಯ ಹುಟ್ಟಿಸಲು ಸರಕಾರ ನನ್ನ ಮನೆಯ ಬೆಂಗಾವಲು ರಕ್ಷಕರನ್ನು ವಾಪಸ್ ಕರೆಸಿಕೊಂಡಿದೆ. ಈ ಮೂಲಕ ಸರಕಾರ ನನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಮುಡಾ ಹಗರಣ ಇಲ್ಲಿಗೆ ನಿಲ್ಲಲ್ಲ, ಸಿದ್ದರಾಮಯ್ಯ ಜೈಲಿಗೆ ಹೋಗೋದು ಪಕ್ಕಾ ಛಲವಾದಿ ನಾರಾಯಣ ಸ್ವಾಮಿ
ಶುಕ್ರವಾರ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ನಮ್ಮ ಮನೆಗೆ 3 ಜನ ಬೆಂಗಾವಲು ರಕ್ಷಕರನ್ನು ನೀಡಿದ್ದರು. ಇದು ನಮಗೆ ಕೊಡಬೇಕಾದ ಭದ್ರತೆ ಎಂದು ನುಡಿದರು.
ಇನ್ನೂ ಬೆಂಗಾವಲು ರಕ್ಷಣೆಯನ್ನು ವಾಪಸ್ ಪಡೆಯುವ ಹಿಂದೆ ಪ್ರಿಯಾಂಕ್ ಖರ್ಗೆ, ಎಲ್ಲರೂ ಇದ್ದಾರೆ ಎಂದು ದೂರಿದರು.
ರಾಜ್ಯ ವರ್ಗೀಕೃತ ಭದ್ರತಾ ಪುನರ್ ವಿಮರ್ಶಣಾ ಸಮಿತಿ ಈ ಆದೇಶ ಮಾಡಿದೆ. ನನಗೇನಾದರೂ ಆದರೆ, ಸರಕಾರ ಎಷ್ಟು ಹೊಣೆಯೋ ಪ್ರಿಯಾಂಕ್ ಖರ್ಗೆಯವರ ಕುಟುಂಬವೂ ಅಷ್ಟೇ ಹೊಣೆ ಎಂದು ಎಚ್ಚರಿಸಿದರು.
ನಾನು ವಿಪಕ್ಷ ನಾಯಕ ಆಗಿದ್ದು ಸರಕಾರದ ನ್ಯೂನತೆ, ಭ್ರಷ್ಟಾಚಾರವನ್ನು ಹೊರಕ್ಕೆ ತರುವ ಜವಾಬ್ದಾರಿ ಪಡೆದಿದ್ದೇನೆ ಎಂದರು.