Select Your Language

Notifications

webdunia
webdunia
webdunia
webdunia

ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಬ್ಲ್ಯಾಕ್‍ಮೇಲ್: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಗುರುವಾರ, 16 ಅಕ್ಟೋಬರ್ 2025 (17:11 IST)
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಹುಶಃ ಸುಳ್ಳಿನ ಕಟ್ಟು ಕಥೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರು ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣುತ್ತಿದ್ದರೆ ನಮ್ಮದೇನೂ ಅಭ್ಯಂತರ ಇಲ್ಲ; ಆದರೆ, ಬಿಜೆಪಿಯಿಂದ ಬೆದರಿಕೆ ಕರೆ ಬಂದಿತ್ತು ಎಂದಿದ್ದಾರೆ. ಬೆದರಿಕೆ ಕರೆ ಆಗಿದ್ದರೆ ಅವರು ದೂರು ಕೊಡಬೇಕಿತ್ತು. ಸತ್ಯ ಹೊರಕ್ಕೆ ಬರುತ್ತಿತ್ತು ಎಂದು ನುಡಿದರು. ಅವರ ಹೇಳಿಕೆ ಒಂದು ರೀತಿಯ ಅಭಾಸ ಎಂದು ಟೀಕಿಸಿದರು. ಈ ಮೂಲಕ ಅವರು ಕಾಂಗ್ರೆಸ್ ಪಕ್ಷವನ್ನು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ನನ್ನ ಅನಿಸಿಕೆ ಎಂದು ನುಡಿದರು.
 
ಮುಖ್ಯಮಂತ್ರಿ ಹುದ್ದೆ ಬಯಸುವವರು ಹಲವು ತಂತ್ರಗಳನ್ನು ಹೂಡುವುದು ಸಹಜ. ಬಿಜೆಪಿ ವಿರುದ್ಧ ಆಪಾದನೆ ಮಾಡಿ, ಕಾಂಗ್ರೆಸ್ ಪಕ್ಷ ಅಥವಾ ಹೈಕಮಾಂಡಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ನನ್ನ ಅನಿಸಿಕೆ ಎಂದರು.

ಕನ್ನೇರಿ ಸ್ವಾಮೀಜಿಯವರಿಗೆ ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸರಕಾರವು ಬೇಡದ್ದಕ್ಕೆಲ್ಲ ಬಾಯಿ ಮಾಡುತ್ತದೆ. ಸಾಮಾನ್ಯ ಜನರ ಬಾಯಿ ಮುಚ್ಚಿಸುತ್ತದೆ ಎಂದು ಟೀಕಿಸಿದರು. ಇದು ಡಿ.ಸಿ.ಯವರು ಸ್ವಯಂಪ್ರೇರಿತವಾಗಿ ಮಾಡಿದ್ದಲ್ಲ; ಇದು ಸರಕಾರದ ತಂತ್ರಗಾರಿಕೆ. ಇದು ಸರಿಯಾದ ಕ್ರಮವಲ್ಲ; ಆದರೆ, ಇದು ಮೊಂಡು ಸರಕಾರ ಎಂದು ಆಕ್ಷೇಪಿಸಿದರು.

ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯೇತರ ಸಂಘಟನೆಗಳಲ್ಲಿ ಯಾವುದೇ ಅಧಿಕಾರಿ, ಸಾಮಾನ್ಯ ಜನರು ಭಾಗವಹಿಸಲು ಕಾನೂನಿನಲ್ಲಿ ಅಡೆತಡೆ ಇಲ್ಲ. ಅಧಿಕಾರಿಗಳು ರಾಜಕೀಯ ಚಟುವಟಿಕೆ ಹೊರತುಪಡಿಸಿ ಯಾವುದೇ ಸಂಘಟನೆಗಳ ಚಟುವಟಿಕೆಯಲ್ಲಿ ಭಾಗವಹಿಸುಬಹುದೆಂದು ಕಾನೂನಿನಲ್ಲಿ ಇದೆ. ಈ ಸರಕಾರ, ಸಚಿವರು ಅವಿವೇಕತನ ಪ್ರದರ್ಶಿಸಿ ಕಾನೂನುಗಳಿಗೂ ಮೀರಿದ ಸರಕಾರ ತಮ್ಮದೆಂದು ತೋರ್ಪಡಿಸಲು ಹೊರಟಿದ್ದಾರೆ. ಇತಿಮಿತಿ ಇಲ್ಲದಂತೆ ಆಡುತ್ತಿರುವ ಈ ಸರಕಾರಕ್ಕೆ ಕಾನೂನಿನ ಇತಿಮಿತಿಯನ್ನು ಯಾರಾದರೂ ತೋರಿಸಿ ಕೊಡಬೇಕಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ; ಜನರಿಗೆ ಸೌಲಭ್ಯಗಳು ಸಿಗುತ್ತಿಲ್ಲ; ಅತಿವೃಷ್ಟಿ, ಅನಾವೃಷ್ಟಿ ಆಗಿದೆ. ಅದಕ್ಕೆ ಹಣ ಕೊಡಲು ಹಣ ಇಲ್ಲ; ರಸ್ತೆ ಗುಂಡಿ ಮುಚ್ಚಲು ಇವರಿಗೆ ಯೋಗ್ಯತೆ ಇಲ್ಲ. ಮಳೆ ಬಂದಾಗ ನಗರ ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಜನರಿಗೆ ತೊಂದರೆ ಆಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಕೈಗಾರಿಕೆದಾರರೂ ಬೇರೆ ರಾಜ್ಯಕ್ಕೆ ಹೋಗುವ ಬೆದರಿಕೆ ಹಾಕಿದ್ದಾರೆ. ಇಲ್ಲಿ ಬರಬೇಕಿದ್ದ ಗೂಗಲ್ ಎಐ ಸಂಸ್ಥೆಯು ಆಂಧ್ರ ಪ್ರದೇಶಕ್ಕೆ ಹೋಗಿದೆ. ಕರ್ನಾಟಕದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಎದ್ದು ಕಾಣುವ ಸಂದರ್ಭದಲ್ಲಿ ಇದರ ಕುರಿತು ಚರ್ಚೆ ಆಗಬಾರದೆಂಬ ಉದ್ದೇಶಕ್ಕೆ ಕೆಲವು ಅವಿವೇಕಿ ಸಚಿವರು ತಮ್ಮ ಕೆಲಸ ಮಾಡದೇ ಬೇರೆ ಬೇರೆ ಕಡೆಗೆ ವಿಷಯಾಂತರ ಮಾಡುವ ಕೆಲಸ ಮಾಡುತ್ತಾರೆ ಎಂದರು.
 
ಈ ಸರಕಾರದಲ್ಲಿ ವರ್ಗಾವಣೆಗೊಬ್ಬ ಸಚಿವರು ಇದ್ದಾರೆಂದು ಕೆಲವರು ಹೇಳುತ್ತಾರೆ. ಅವರು ಮೈಸೂರು ಕಡೆಯ ಎಂಎಲ್‍ಸಿ. ಇನ್ನೊಬ್ಬರು ಗೊಂದಲದ ಸಚಿವರು. ಅವರ ಇಲಾಖೆ ಬಿಟ್ಟು ಬರೀ ಗೊಂದಲ ಸೃಷ್ಟಿಸುವವರು. ಜೊತೆಗೆ ವಿಷಯಾಂತರ ಮಾಡುವವರು. ಇನ್ನು ಕೆಲವರು ಬಾಯಿಬಡುಕ ಸಚಿವರು. ಲೊಟಲೊಟ ಬಡ್ಕೊಳ್ತ ಇರ್ತಾರೆ ಎಂದು ಟೀಕಿಸಿದರು. ಇದು ಮೈಗಳ್ಳತನದ ಸರಕಾರ ಎಂದು ದೂರಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಚೋದನಕಾರಿ ಭಾಷಣ ಮಾಡಿದ ಕನ್ನೇರಿ ಕಾಡಸಿದ್ಧೇಶ್ವರ ಶ್ರೀಗಳಿಗೆ ಬಿಗ್‌ಶಾಕ್