ಬೆಂಗಳೂರು: ಶಾಲೆಗಳ ಆವರಣಗಳು ಯಾವುದೇ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಂದ ಮುಕ್ತವಾಗಿರಬೇಕು ಎಂದು 2013 ರಲ್ಲಿ ಬಿಜೆಪಿ ಸರ್ಕಾರವೇ ಆದೇಶಿಸಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಹಿಂದೆ ಬಿಜೆಪಿ ಸರ್ಕಾರವೇ ಇಂತಹ ಆದೇಶಿಸಿತ್ತು. ಇದೀಗ ಆರ್ ಎಸ್ಎಸ್ ಚಟುವಟಿಕೆಗಳಿಗೆ ಬ್ರೇಕ್ ಹಾಕಿದರೆ ವಿರೋಧಿಸುತ್ತಿರುವುದು ಯಾಕೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಶಾಲೆಗಳು, ಶಾಲೆಗಳ ಆವರಣಗಳು ಯಾವುದೇ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಂದ ಮುಕ್ತವಾಗಿರಬೇಕು, ಶಾಲೆಗಳು ಶಿಕ್ಷಣೇತರ ಚಟುವಟಿಕೆಗಳಿಂದ ಮುಕ್ತವಾಗಿರಬೇಕು.
ಶಾಲೆಗಳ ಆವರಣವು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಿರಬೇಕು. ಈ ಆದೇಶವನ್ನು ಹೊರಡಿಸಿದ್ದು 2013ರಲ್ಲಿ ಬಿಜೆಪಿ ಸರ್ಕಾರ. ಬಿಜೆಪಿ ಪಕ್ಷಕ್ಕೆ ತನ್ನದೇ ಸರ್ಕಾರ ಹೊರಡಿಸಿದ ಆದೇಶ, ತಾವೇ ರೂಪಿಸಿದ ನಿಯಮಗಳ ಬಗ್ಗೆ ಅರಿವಿಲ್ಲವೇ? ಅಥವಾ ಈ ಆದೇಶ ಆರ್ಎಸ್ಎಸ್ ಗೆ ಅನ್ವಯಿಸುವುದಿಲ್ಲವೇ? RSS ಸಂಘಟನೆಯು ಈ ದೇಶದ ಸಂವಿಧಾನ, ಕಾನೂನು, ನೀತಿ ನಿಯಮಗಳಿಗೆ ಅತೀತವಾಗಿದೆ ಎಂದು ಭಾವಿಸಿದೆಯೇ ಬಿಜೆಪಿ?
ಈ ಆದೇಶ ಜಾರಿಯಲ್ಲಿದ್ದರೂ ಆರ್ಎಸ್ಎಸ್ ಎಂಬ ಸಂಘಟನೆಯು ಯಾವ ಅಂಜಿಕೆ ಇಲ್ಲದೆ ಶಾಲೆಗಳು ಹೆಡ್ಗೆವಾರ್ ಅವರ ವಂಶಸ್ಥರ ಆಸ್ತಿ ಎಂಬಂತಹ ಧೋರಣೆಯಲ್ಲಿ ತನ್ನ ಚಟುವಟಿಕೆ ನಡೆಸುತ್ತಿದೆ.
ಕೂಗುಮಾರಿಗಳಂತೆ ಕೂಗುತ್ತಿರುವ ಬಿಜೆಪಿಯವರು ತಮ್ಮ ಸರ್ಕಾರದ ಆದೇಶವನ್ನು ಒಮ್ಮೆ ಅವಲೋಕನ ಮಾಡಿ ನಂತರ ತಾವೇನು ಮಾತಾಡಬೇಕು ಎಂದು ನಿರ್ಧರಿಸಲಿ ಎಂದು ಸವಾಲು ಹಾಕಿದ್ದಾರೆ.