ನವದೆಹಲಿ: ಪ್ರಧಾನಿ ಮೋದಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಂಡರೆ ಭಯ. ಅದಕ್ಕೆ ಇದೇ ಸಾಕ್ಷಿ ಎಂದು ರಾಹುಲ್ ಗಾಂಧಿ ಕೆಲವು ಅಂಶಗಳನ್ನು ಒಳಗೊಂಡ ಟ್ವೀಟ್ ಮಾಡಿ ಟೀಕಿಸಿದ್ದಾರೆ.
ರಷ್ಯಾದಿಂದ ಭಾರತ ಇನ್ನು ಮುಂದೆ ತೈಲ ಖರೀದಿಸಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ ರಾಹುಲ್ ಗಾಂಧಿ ಈ ರೀತಿ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ. ಭಾರತದ ಆಂತರಿಕ ವಿಚಾರಗಳನ್ನು ನಿರ್ಧರಿಸಲು ಮತ್ತು ಘೋಷಣೆ ಮಾಡಲು ಮತ್ತೊಮ್ಮೆ ಟ್ರಂಪ್ ಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ರಷ್ಯಾದಿಂದ ಭಾರತ ತೈಲ ಖರೀದಿಸಲ್ಲ ಎಂದು ನಿರ್ಧರಿಸಲು ಟ್ರಂಪ್ ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪದೇ ಪದೇ ಅಮೆರಿಕಾ ತಿರಸ್ಕಾರದ ಹೊರತಾಗಿಯೂ ಅಭಿನಂದನಾ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಅಮೆರಿಕಾಗೆ ಹಣಕಾಸು ಸಚಿವರ ಭೇಟಿಯನ್ನೂ ರದ್ದು ಮಾಡಿದ್ದಾರೆ. ಶರ್ಮ್ ಎಲ್ ಶೇಖ್ ಅವರನ್ನು ಬಿಟ್ಟುಕೊಡಲಾಗಿದೆ. ಆಪರೇಷನ್ ಸಿಂಧೂರ್ ಬಗ್ಗೆ ಪದೇ ಪದೇ ಟ್ರಂಪ್ ಹೇಳಿಕೆ ನೀಡಿದರೂ ಅದನ್ನು ವಿರೋಧಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ವಕ್ತಾರ ಜೈ ರಾಮ್ ರಮೇಶ್ ಕೂಡಾ ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರದ ವಿದೇಶಾಂಗ ನೀತಿ ಅತ್ಯಂತ ದುರ್ಬಲವಾಗಿದೆ. ಭಾರತದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಗುತ್ತಿಗೆಯನ್ನು ಅಮೆರಿಕಾಗೆ ನೀಡಲಾಗಿದೆ. ಮೋದಿಯ 56 ಇಂಚಿನ ಎದೆ ಕುಗ್ಗಿದೆ ಎಂದು ಟೀಕಿಸಿದ್ದಾರೆ.