ಮೈಸೂರು: ಉದ್ಯೋಗ ಸಿಗುವವರೆಗೂ ಯುವನಿಧಿ ಯೋಜನೆಯ ಅನುದಾನ ಫಲಾನುಭವಿಗೆ ನಿಲ್ಲುವುದಿಲ್ಲ. ಕೌಶಲಾಭಿವೃದ್ಧಿ ತರಬೇತಿಗೆ ಸೇರಿದರೆ ಭತ್ಯೆ ನಿಲ್ಲುತ್ತದೆಂಬ ಬಿಜೆಪಿಯವರು ಹೇಳುವ ಸುಳ್ಳುಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಶುಕ್ರವಾರ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗ ದೊರೆತ ಮೇಲೆ ಯುವನಿಧಿ ನಿಲ್ಲಿಸಲಾಗುವುದು. ಎರಡು ವರ್ಷದವರೆಗೂ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಮಾಹಿತಿ ಹಂಚಿಕೊಂಡರಲು
2ಕೋಟಿ ಉದ್ಯೋಗ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. 11 ವರ್ಷದಲ್ಲಿ 22 ಕೋಟಿ ನೌಕರಿ ಕೊಡಬೇಕಿತ್ತು. ಕೊಟ್ಟ ಮಾತು ತಪ್ಪಿ ನಡೆಯಲು ನಾನೇನು ಮೋದಿಯಲ್ಲ. ಇನ್ನೂ ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳಿಗೆ ದುಡ್ಡಿಲ್ಲವೆಂದು ಅಪಪ್ರಚಾರ ಮಾಡಿದ್ದವು. ಲೋಕಸಭಾ ಚುನಾವಣೆ ನಂತರ ಅನುದಾನ ನಿಲ್ಲಿಸುತ್ತಾರೆಂದರು. ನಾವು ಏನು ಹೇಳುತ್ತೇವೆಯೋ ಅದನ್ನು ಮಾಡೇ ತೀರುತ್ತೇವೆ ಎಂದರು.
ನುಡಿದ ಹಾಗೇ ನಡೆದುಕೊಳ್ಳುವುದು ನಮ್ಮ ಸರ್ಕಾರ. ಕಳೆದ ಎರಡೂವರೆ ವರ್ಷದಲ್ಲಿ 28 ಸಾವಿರಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದ್ದು, 35 ಸಾವಿರ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.