ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ. ಆದ್ರೆ ಅದರ ನಿರ್ವಹಣೆಗೆ 6 ಬಾರಿ ಟೆಂಡರ್ ಕರೆದ್ರೂ ಯಾರೊಬ್ಬರು ಅತ್ತ ತಿರುಗಿ ನೋಡುತ್ತಿಲ್ಲ. ಸುಮಾರು 78 ಕೋಟಿ ವೆಚ್ಚದಲ್ಲಿ ನಿರ್ಮಿಸಿರೋ ಆ ಕಟ್ಟಡಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಒದಗಿಬಂದಿಲ್ಲ. ಪಾರ್ಕಿಂಗ್ ಕಟ್ಟಡ ಕಟ್ಟುವ ಮೊದಲೇ ಬಿಬಿಎಂಪಿ ಅಧಿಕಾರಿಗಳು ಇಟ್ಟ ಆ ಒಂದು ಹೆಜ್ಜೆ ಇದೀಗ ಕೋಟಿ ಕೋಟಿ ವೆಚ್ಚದ ಕಟ್ಟಡವನ್ನ ಧೂಳು ಹಿಡಿವಂತೆ ಮಾಡಿಬಿಟ್ಟಿದೆ. ಬೆಂಗಳೂರಿನ ಪ್ರತಿಭಟನೆಗಳ ಹಾಟ್ ಸ್ಪಾಟ್ ಅಂತಾನೇ ಫೇಮಸ್ ಆಗಿರೋ ಫ್ರೀಡಂ ಪಾರ್ಕ್ ಪಕ್ಕ ಸಾಗಿದ್ರೆ ಹೀಗೆ ಸಿಂಗಾರಗೊಂಡ ಕಟ್ಟಡವೊಂದು ನಿಮ್ಮ ಕಣ್ಣಿಗೆ ಬಿದ್ದೆ ಬೀಳುತ್ತೆ. ಅದು ಕಳೆದ 4 ತಿಂಗಳ ಹಿಂದೆ ಪಾಲಿಕೆ ವತಿಯಿಂದ 78 ಕೋಟಿ ವೆಚ್ಚದಲ್ಲಿ ಕಟ್ಟಿರೋ ಪಾರ್ಕಿಂಗ್ ಕಟ್ಟಡ. ಆದ್ರೆ ಕಟ್ಟಡ ಕಟ್ಟಿ 4 ತಿಂಗಳು ಕಳೆದ್ರೂ ಉದ್ಘಾಟನೆ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ.
ಪಾರ್ಕಿಂಗ್ ಕಟ್ಟಡದ ನಿರ್ವಹಣೆಗೆ ಕಳೆದ ಡಿಸೆಂಬರ್ನಿಂದಲೂ ಇದುವರೆಗೆ 6 ಬಾರೀ ಟೆಂಡರ್ ಕರೆಯಲಾಗಿದ್ರೂ ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡಕ್ಕೆ ಬೀಗ ಹಾಕಲಾಗಿದ್ದು, ಧೂಳು ಹಿಡಿಯುತ್ತಿದೆ. ಗುತ್ತಿಗೆದಾರರು ಯಾಕೆ ಹಿಂದೇಟು ಹಾಕ್ತಿದ್ದಾರೆ ಅನ್ನೋದನ್ನ ಗಮನಿಸೋದಾದ್ರೆ.
-ಕಟ್ಟಡದಲ್ಲಿ ಸಿಸಿ ಕ್ಯಾಮರಾ, ಇ-ಟಿಕೆಟಿಂಗ್ ವ್ಯವಸ್ಥೆ, ಆಟೋ ಪೇ ಸಿಸ್ಟಂ ಇಲ್ಲ
-ಜನರಿಗೆ ಪಾರ್ಕಿಂಗ್ನಿಂದ ಹೊರಗೆ ಬರಲು ವಾಹನ ವ್ಯವಸ್ಥೆ ಮಾಡಬೇಕು
- ಸುತ್ತಮುತ್ತಲಿನ ರಸ್ತೆಯಲ್ಲಿ ಉಚಿತವಾಗಿ ವಾಹನ ನಿಲುಗಡೆಗೆ ಸ್ಥಳವಿದೆ
-ವಾಹನ ಮಾಲೀಕರು ಹಣ ಕೊಟ್ಟು ವಾಹನ ನಿಲುಗಡೆಗೆ ಬರೋದು ಕಷ್ಟ
ಈ ಎಲ್ಲಾ ಸಮಸ್ಯೆಗಳಿರೋದರಿಂದ ಗುತ್ತಿಗೆದಾರರ ಪಾರ್ಕಿಂಗ್ ಕಟ್ಟಡದ ಟೆಂಡರ್ ಪಡೆಯೋಕೆ ಹಿಂದೇಟು ಹಾಕ್ತಿದ್ದಾರೆ. ಇತ್ತ ಗುತ್ತಿಗೆದಾರರು ಸಿಗದೇ ಇರೋದರಿಂದ 78 ಕೋಟಿ ವೆಚ್ಚದಲ್ಲಿ ಕಟ್ಟಲಾದ ಕಟ್ಟಡ ಬಳಕೆಗೆ ಬಾರದೇ ಧೂಳು ಹಿಡಿತಿದೆ. 60 ಪರ್ಸೆಂಟ್ ಬಾಡಿಗೆ ಕೊಡಬೇಕು ಅನ್ನೋ ಷರತ್ತಿನಿಂದ ಹೊಸ ಪಾರ್ಕಿಂಗ್ ಕಟ್ಟಡದ ಗುತ್ತಿಗೆ ಪಡೆಯೋಕೆ ಗುತ್ತಿಗೆದಾರರು ಹಿಂದೇಟು ಹಾಕ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ಬಿಬಿಎಂಪಿ ಕೂಡ ಈ ಷರತ್ತನ್ನ ತಿದ್ದುಪಡಿ ಮಾಡೋಕೆ ಚಿಂತನೆ ನಡೆಸ್ತಿದೆ