ರಾಜ್ಯದಲ್ಲಿ ಈ ಹಿಂದೆ ಆಪರೇಷನ್ ಕಮಲ ನಡೆಸಿ ಮೈತ್ರಿ ಸರ್ಕಾರ ಕೆಡವಿದ್ದ ತಂಡ ಮತ್ತೆ ಸಕ್ರಿಯವಾಗಿದೆ. ಈ ತಂಡ ಕಾಂಗ್ರೆಸ್‌ನ ಐವರು ಶಾಸಕರನ್ನು ಭೇಟಿ ಮಾಡಿ 50 ಕೋಟಿ ರು. ಹಣ, ಮಂತ್ರಿ ಸ್ಥಾನ, ಅಮಿತ್ ಶಾ ಭೇಟಿ ಮಾಡಿಸುವ ಆಮಿಷ ಒಡ್ಡಿದೆ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗಣಿಗ ರವಿ ಆ ತಂಡದವರು ನಮ್ಮ ಶಾಸಕರನ್ನು ಸಂಪರ್ಕಿಸಿದ ಆಡಿಯೋ, ವಿಡಿಯೋಗಳೂ ನಮ್ಮ ಬಳಿ ಇವೆ. ಅವುಗಳನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇವೆ ಎಂದಿದ್ದಾರೆ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ಹಾಗೂ ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ಅವರು ಹೇಳಿರುವುದು ಸಂಚಲನಕ್ಕೆ ಕಾರಣವಾಗಿದೆ.
ಇನ್ನು ಇವರ ಹೇಳಿಕೆಗೆ ಮದ್ದೂರು ಶಾಸಕ ಕೆ.ಎಂ.ಉದಯ್ ಕೂಡ ದನಿಗೂಡಿಸಿದ್ದು, ಸಿದ್ದರಾಮಯ್ಯ ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಆದರೆ ಯಾವಾಗ ಆಗಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತೆ ಎಂದು ತಿಳಿಸಿದ್ದಾರೆ.