ಅಂತೂ ಇಂತೂ ತಮ್ಮ ಸಿನಿಮಾಗಳ ಮೂಲಕ ರಾಜಕೀಯ ವ್ಯವಸ್ಥೆಯ ವಿಡಂಬನೆ ಮಾಡುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರುಪ್ಪೀಸ್ ರೆಸಾರ್ಟ್`ನಲ್ಲಿ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ ಜನಸೇವೆಯ ತಮ್ಮ ಪರಿಕಲ್ಪನೆಯನ್ನ ಮಾಧ್ಯಮಗಳ ಮುಂದಿಟ್ಟರು.
ನಮಗೆ ನಾಯಕರೂ ಬೇಡ, ಸೇವಕರೂ ಬೇಡ. ಕರ್ನಾಟಕದ ಜನ ಅಶಕ್ತರಲ್ಲ, ನಮಗೆ ಕಾರ್ಮಿಕರು ಬೇಕು, ಕೆಲಸ ಮಾಡುವವರು ಬೇಕು. ಹೀಗಾಗಿಯೇ ಖಾಕಿ ಹಾಕಿ ಕುಳಿತಿದ್ದೇನೆ ಎಂದು ಉಪೇಂದ್ರ ಹೇಳಿದರು.
ದುಡ್ಡಿನ ಬಲವಿಲ್ಲದೆ ರಾಜಕೀಯಕ್ಕೆ ಬರುವುದು ಸಾಧ್ಯವಿಲ್ಲವೆಂದು ಎಲ್ಲರೂ ಹೇಳುತ್ತಿದ್ದರು. ಪಾರ್ಟಿ ಫಂಡ್`ಗೆಂದು ದುಡ್ಡು ಕೊಟ್ಟವರು ಅದನ್ನ ಹಿಂಪಡೆಯಲು ಏನಾದರೊಂದು ಕೇಳುತ್ತಾರೆ. ಇದರಿಂದ ಭ್ರಷ್ಟಾಚಾರ ಶುರುವಾಗುತ್ತೆ. ಹಾಗಾಗಿ, ಹಣದ ಸಹವಾಸವೇ ಇಲ್ಲದೆ ಪ್ರಜಾಕೀಯ ಮಾಡುವುದಾಗಿ ಹೇಳಿದ್ದಾರೆ. ಗೆಲ್ಲುತ್ತೇನೆಂಬ ಅಹಂಕಾರ, ಸೋಲುತ್ತೇನೆಂಬ ಭಯ ನನಗಿಲ್ಲ. ಹೊಸ ಹೊಸ ಐಡಿಯಾ ಇರುವವರು ನಮ್ಮ ಜೊತೆ ಬನ್ನಿ ಎಂದು ಉಪೇಂದ್ರ ಕರೆ ನೀಡಿದ್ದಾರೆ.
ಹಣ, ಜಾತಿ ಮತ್ತು ತೋಳ್ಬಲದಿಂದ ಮುಕ್ತವಾದ ರಾಜಕೀಯ ಪ್ರಜಾಕೀಯ ಮಾಡುವುದಾಗಿ ಹೇಳಿದ ಉಪೇಂದ್ರ, ಜನರ ತೆರಿಗೆ ಹಣ ನೇರವಾಗಿ ಅವರಿಗೇ ತಲುಪಬೇಕು ಅದಕ್ಕಾಗಿ ನಾವೆಲ್ಲ ಸೇರಿ ಕೆಲಸ ಮಾಡಬೇಕು. ಇದಕ್ಕಾಗಿ ಹೊಸ ಹೊಸ ಐಡಿಯಾಗಳನ್ನ ಕೊಡುವಂತೆ ಕರೆ ನೀಡಿದ್ದಾರೆ.
[email protected],
[email protected],
[email protected] ಎಂಬ ಇಮೇಲ್ ಐಡಿ ಕೊಟ್ಟಿರುವ ಉಪೇಂದ್ರ ಐಡಿಯಾ ಮತ್ತು ಅಭಿಪ್ರಾಯಗಳನ್ನ ಶೇರ್ ಮಾಡುವಂತೆ ಕೋರಿದ್ದಾರೆ.
ಯಾವುದೇ ಪಕ್ಷಕ್ಕೆ ಸೇರದೇ ಸ್ವತಂತ್ರ ಪಕ್ಷ ರಚಿಸುವುದಾಗಿ ಹೇಳಿರುವ ಉಪೇಂದ್ರ ಎಲ್ಲರ ಜೊತೆ ಚರ್ಚಿಸಿ ಪಕ್ಷವನ್ನ ಅಂತಿಮಗೊಳಿಸುವುದಾಗಿ ಉಪೇಂದ್ರ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ