ಬೆಂಗಳೂರು: ನಟ ಹರೀಶ್ ರಾಯ್ ನಿನ್ನೆ ನಿಧನರಾಗಿದ್ದರು. ಅವರ ಅಂತಿಮ ದರ್ಶನಕ್ಕೆ ಬಂದ ರಾಕಿಂಗ್ ಸ್ಟಾರ್ ಯಶ್ ಮಾಡಿದ ಕೆಲಸವೊಂದಕ್ಕೆ ಎಲ್ಲರೂ ನಿಬ್ಬೆರಗಾಗಿದ್ದಾರೆ.
ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ ಹರೀಶ್ ರಾಯ್ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ನಿಧನರಾದರು. ಅವರು ನಿಧನರಾದ ಸುದ್ದಿ ತಿಳಿದ ಬೆನ್ನಲ್ಲೇ ಅವರ ಮಗನಿಗೆ ಯಶ್ ಕರೆ ಮಾಡಿ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದರು.
ಅಷ್ಟೇ ಅಲ್ಲ, ಹರೀಶ್ ರಾಯ್ ಅಂತಿಮ ದರ್ಶನಕ್ಕೆ ಖುದ್ದಾಗಿ ಬಂದರು. ಬಂದವರೇ ಸೀದಾ ಹರೀಶ್ ರಾಯ್ ಮಗನ ಬೆನ್ನು ತಟ್ಟಿ ಸಾಂತ್ವನ ಹೇಳಿದರು. ಹರೀಶ್ ರಾಯ್ ಕುಟುಂಬಕ್ಕೆ ಸಹಾಯ ಮಾಡಲೆಂದೇ ಯಶ್ ನೇರವಾಗಿ ಅಲ್ಲಿಗೆ ಬಂದಿದ್ದರು. ಹೀಗಾಗಿ ಹರೀಶ್ ರಾಯ್ ಮಗನನ್ನು ತಮ್ಮ ಕಾರೊಳಗೆ ಕೂರಿಸಿಕೊಂಡಿದ್ದಾರೆ.
ಬಳಿಕ ಯಾರಿಗೂ ಕಾಣದಂತೆ ಅವರಿಗೆ ಸಹಾಯ ಮಾಡಿದ್ದಾರೆ. ಅನಂತರ ತಮ್ಮ ಪಾಡಿಗೆ ತಾವು ಅಲ್ಲಿಂದ ತೆರಳಿದ್ದಾರೆ. ಅಲ್ಲಿ ಸಾಕಷ್ಟು ಜನ, ಮಾಧ್ಯಮದವರು ಇದ್ದಿದ್ದರಿಂದ ಅವರ ಮುಂದೆ ತೋರಿಸಿಕೊಳ್ಳದೇ ಗುಟ್ಟಾಗಿಯೇ ಸಹಾಯ ಮಾಡಿ ಹೋಗಿದ್ದಾರೆ. ಇದಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದಕ್ಕೆ ಮೊದಲು ಹರೀಶ್ ರಾಯ್ ಗೆ ಕ್ಯಾನ್ಸರ್ ಇದೆ ಎಂದು ತಿಳಿದ ತಕ್ಷಣ ಮೊದಲು ಸಹಾಯ ಮಾಡಿದವರೇ ಯಶ್. ಕೆಜಿಎಫ್ ಸಿನಿಮಾದಲ್ಲಿ ತಮ್ಮ ಜೊತೆಗೆ ಅಭಿನಯಿಸಿದ್ದ ಹರೀಶ್ ರಾಯ್ ಮೇಲೆ ಯಶ್ ಗೆ ಎಲ್ಲಿಲ್ಲದ ಪ್ರೀತಿ. ಅನಾರೋಗ್ಯದಲ್ಲಿದ್ದಾಗಲೇ ಏನೂ ಯೋಚನೆ ಮಾಡಬೇಡಿ, ಎಲ್ಲಾ ನಾನು ನೋಡಿಕೊಳ್ಳುತ್ತೇನೆ ಎಂದು ಧೈರ್ಯ ತುಂಬಿದ್ದವರು ಯಶ್. ಈಗ ಸಾವಿನ ಬಳಿಕವೂ ಅವರ ಕುಟುಂಬಕ್ಕೆ ಹೆಗಲಾಗಿ ನಿಂತಿದ್ದಾರೆ.