ಬೆಂಗಳೂರು: ಸ್ಯಾಂಡಲ್‌ವುಡ್ ಸಿನಿಪ್ರಿಯರನ್ನು ನಗೆಗಡಲಿನಲ್ಲಿ ತೇಲಿಸಿದ ಹಿರಿಯ ನಟ ಉಮೇಶ್ ಅ. 10ರಂದು ಮನೆಯಲ್ಲಿ ಬಿದ್ದು ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. 80 ವರ್ಷದ ಉಮೇಶ್ ಅವರಿಗೆ ಲಿವರ್ ಕ್ಯಾನ್ಸರ್ ಇರುವ ವಿಚಾರ ಗೊತ್ತಾಗಿದೆ. ರೋಗವನ್ನು ಖಚಿತಪಡಿಸಿಕೊಳ್ಳಲು ಮತ್ತಷ್ಟು ಪರೀಕ್ಷೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜಾರಿ ಬಿದ್ದ ಕಾರಣ ಉಮೇಶ್ ಅವರಿಗೆ ಮೂಳೆಗೆ ಏಟಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಅವರ ಸ್ಕ್ಯಾನಿಂಗ್ ನಡೆಸಿದರು. ಈ ಪರೀಕ್ಷೆಯ ವೇಳೆ ಉಮೇಶ್ ಅವರ ಲಿವರ್‌ನಲ್ಲಿ ಗಡ್ಡೆ ಇರುವುದು ತಿಳಿದು ಬಂತು. ಮತ್ತಷ್ಟು ಪರೀಕ್ಷೆಗೆ ಒಳಪಡಿಸಿದಾಗ ಅದು ಕ್ಯಾನ್ಸರ್ ಗಡ್ಡೆ ಎನ್ನುವುದು ಗೊತ್ತಾಗಿದೆ. ಸದ್ಯ ಈ ವಿಚಾರ ತಿಳಿದು ಅವರ ಮನೆಯವರ ಜತೆಗೆ ಅಭಿಮಾನಿಗಳಿಗೂ ಆಘಾತವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ಹಾರೈಸುತ್ತಿದ್ದಾರೆ.
ಮೈಸೂರಿನಲ್ಲಿ ಜನಿಸಿದ ಉಮೇಶ್ ರಂಗಭೂಮಿ ಮೂಲಕ ನಟನಾ ಕೇತ್ರಕ್ಕೆ ಕಾಲಿಟ್ಟರು. 4ನೇ ವರ್ಷದಲ್ಲಿ ಅವರು ನಾಟಕಗಳಲ್ಲಿ ಅಭಿನಯಿಸತೊಡಗಿದರು. 1960ರಲ್ಲಿ ತೆರೆಕಂಡ ಕನ್ನಡದ ಮಕ್ಕಳ ರಾಜ್ಯ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದರು. ಹಾಸ್ಯ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ. ಉಮೇಶ್ 60 ವರ್ಷಗಳಲ್ಲಿ ಸುಮಾರು 350 ಚಿತ್ರಗಳಲ್ಲಿ ನಟಿಸಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನಟ ಉಮೇಶ್ ಅವರ ಆರೋಗ್ಯವನ್ನ ವಿಚಾರಿಸಿದ್ದಾರೆ ಹಿರಿಯ ಕಲಾವಿದರು. ಈ ವೇಳೆ ತಮ್ಮ ಒಡನಾಟ ಹಾಗೂ ಹಳೆದಿನ ಶೂಟಿಂಗ್ ವೇಳೆ ಕಳೆದ ದಿನಗಳನ್ನ ಮೆಲುಕು ಹಾಕಿದ್ದಾರೆ. ಹಿರಿಯ ನಟಿ ಗಿರಿಜಾ ಲೋಕೇಶ್ ಹಾಡು ಹೇಳಿ ಉಮೇಶ ಅವರ ಜೊತೆ ಕೆಲಹೊತ್ತು ಕಾಲಕಳೆದಿದ್ದಾರೆ. ಹಿರಿಯ ನಟಿ ಗಿರಿಜಾ ಲೋಕೇಶ್, ಡಿಂಗ್ರಿ ನಾಗರಾಜ್, ಶ್ರುತಿ ಅವರ ತಾಯಂದಿರು ಹಾಗೂ ತಂದೆ, ನಟ ಗಣೇಶ್ ರಾವ್ ಸೇರಿ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.