ಬೆಂಗಳೂರು: ಕಾಲು ನೋವೆಂದು ಆಸ್ಪತ್ರೆಗೆ ದಾಖಲಾಗಿರುವ ಸ್ಯಾಂಡಲ್ ವುಡ್ ಹಿರಿಯ ನಟ ಉಮೇಶ್ ಗೆ ಗಂಭೀರ ಖಾಯಿಲೆಯಿರುವುದು ಪತ್ತೆಯಾಗಿದೆ.
ನಿನ್ನೆ ನಟ ಉಮೇಶ್ ಮನೆಯಲ್ಲಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡ ಪರಿಣಾಮ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮನೆಯ ಬಾತ್ ರೂಂನಲ್ಲಿ ಬಿದ್ದಿದ್ದ ಅವರು ಎದ್ದು ಓಡಾಡುವ ಸ್ಥಿತಿಯಲ್ಲೂ ಇರಲಿಲ್ಲ.
ಸ್ಟ್ರೆಚರ್ ಮೇಲೆಯೇ ಮಲಗಿಸಿ ಅವರನ್ನು ಚಿಕಿತ್ಸೆಗೆ ಕರೆದೊಯ್ಯುತ್ತಿರುವ ದೃಶ್ಯಗಳು ವೈರಲ್ ಆಗಿದ್ದವು. ಇದೀಗ ಕಾಲು ನೋವಿಗೆಂದು ಚಿಕಿತ್ಸೆ ನೀಡುವಾಗ ಅವರಿಗೆ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ ಇರುವುದಾಗಿ ವೈದ್ಯರು ಮೇಲ್ನೋಟಕ್ಕೆ ಪತ್ತೆ ಮಾಡಿದ್ದಾರೆ.
ಇದೀಗ ಇದರ ಬಗ್ಗೆ ಹೆಚ್ಚಿನ ಪರೀಕ್ಷೆಗಳು ನಡೆಯಲಿವೆ. ಲಿವರ್ ನಿಂದ ಬೇರೆ ಅಂಗಾಂಗಗಳಿಗೂ ಕ್ಯಾನ್ಸರ್ ಹರಡಿರುವುದು ಪತ್ತೆಯಾಗಿದೆ. ಇದೀಗ ಅವರನ್ನು ಹೆಚ್ಚಿನ ಪರೀಕ್ಷೆಗೊಳಪಡಿಸಿ ವೈದ್ಯರು ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎಂದು ತಿಳಿದುಬಂದಿದೆ.