ಬೆಂಗಳೂರು: ಕ್ಯಾನ್ಸರ್ ಮಹಾಮಾರಿಯಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನಟ ಹರೀಶ್ ರಾಯ್ ಇಹಲೋಕ ತ್ಯಜಿಸಿದ್ದಾರೆ. ಇಷ್ಟು ದಿನಗಳ ಕಾಲ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಆದರೆ ಯಾವ ಚಿಕಿತ್ಸೆಯೂ ಫಲಕೊಡಲಿಲ್ಲ.
ಓಂ, ಕೆಜಿಎಫ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಪೋಷಕ ನಟ, ವಿಲನ್ ಆಗಿ ಹೆಸರು ಮಾಡಿದ್ದ ಹರೀಶ್ ರಾಯ್ ಕಳೆದ ಕೆಲ ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ನಡುವೆ ನಟ ಯಶ್ ಸೇರಿದಂತೆ ಚಿತರಂಗದ ಉದಾರಿಗಳು ಆರ್ಥಿಕ ಸಹಾಯ ಮಾಡಿದ್ದರಿಂದ ಒಮ್ಮೆ ಚೇತರಿಸಿಕೊಂಡಿದ್ದರು.
ಆದರೆ ತೀರಾ ಇತ್ತೀಚೆಗೆ ಮತ್ತೆ ಅವರ ಆರೋಗ್ಯ ಹದಗೆಟ್ಟಿತ್ತು. ಎದ್ದು ಓಡಾಡಲೂ ಆಗದ ಸ್ಥಿತಿ ತಲುಪಿತ್ತು. ಚಿಕಿತ್ಸೆಗೆ ಹಣವಿಲ್ಲದೇ ಮತ್ತೆ ಸಹಾಯಕ್ಕಾಗಿ ಮೊರೆ ಇಟ್ಟಿದ್ದರು. ಈಗಲೂ ಕೆಲವರು ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು.
ಆದರೆ ಸತತವಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಅವರ ಆರೋಗ್ಯ ತೀರಾ ಎನ್ನುವ ಮಟ್ಟಿಗೆ ಕುಸಿದಿತ್ತು. ಮೊನ್ನೆಯಷ್ಟೇ ಅವರು ಎದ್ದು ಓಡಾಡಲೂ ಆಗದ ಸ್ಥಿತಿ ತಲುಪಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ನಿಧನರಾಗಿದ್ದಾರೆ. ಅವರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.