ಬೆಂಗಳೂರು: ಬಹುನಿರೀಕ್ಷಿತ ಪುಷ್ಪ 2 ಸಿನಿಮಾ ಇಂದು ರಿಲೀಸ್ ಆಗಿದ್ದು ಕರ್ನಾಟಕದಲ್ಲೂ ಸಿನಿಮಾ ಬಿಡುಗಡೆಯಾಗಿದೆ. ಆದರೆ ಬೆಳಿಗ್ಗಿನ ಶೋವನ್ನೇ ಕೆಲವೆಡೆ ರದ್ದು ಮಾಡಲಾಗಿದೆ. ಇದಕ್ಕೆ ಕಾರಣವೂ ಇದೆ.
ಬೆಂಗಳೂರಿನಲ್ಲಿ ಪುಷ್ಪ 2 ಅಬ್ಬರದ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಬೆಳಿಗ್ಗೆಯೇ 40 ಸಿಂಗಲ್ ಸ್ಕ್ರೀನ್ ಶೋಗಳನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ನಿಯಮಗಳ ಪ್ರಕಾರ ಸಿಂಗಲ್ ಸ್ಕ್ರೀನ್ ಗಳಲ್ಲಿ ಬೆಳಿಗ್ಗೆ 6 ಗಂಟೆಯೊಳಗಿನ ಶೋ ಪ್ರಸಾರ ಮಾಡುವಂತಿಲ್ಲ.
ಆದರೆ ಪುಷ್ಪ 2 ಸಿನಿಮಾವನ್ನು ಬೆಳಿಗ್ಗೆ 3.00 ಮತ್ತು 4.00 ಗಂಟೆಗೆ ಆರಂಭಿಸಲು ಈ ಥಿಯೇಟರ್ ಗಳು ಸಜ್ಜಾಗಿದ್ದವು. ಈ ಕಾರಣಕ್ಕೆ ಈ ಥಿಯೇಟರ್ ಗಳಿಗೆ ನಿರ್ಬಂಧ ಹೇರಲಾಗಿದೆ. ಕರ್ನಾಟಕ ಸಿನಿಮಾ ಖಾಯಿದೆ 1964 ಪ್ರಕಾರ ಇದು ನಿಯಮಗಳಿಗೆ ವಿರುದ್ಧವಾಗಿದೆ. ಅದಕ್ಕಾಗಿ ಜಿಲ್ಲಾಧಿಕಾರಿಗಳು ಈ ಆದೇಶ ನೀಡಿದ್ದಾರೆ.
ಆದರೆ ಪುಷ್ಪ 2 ಸಿನಿಮಾವನ್ನು ಬೆಳಿಗ್ಗಿನ ಮೊದಲ ಶೋ ನೋಡಲು ಈಗಾಗಲೇ ಹಲವು ಫ್ಯಾನ್ಸ್ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಅವರಿಗೆಲ್ಲಾ ಈಗ ಟಿಕೆಟ್ ಹಣವನ್ನು ಮರಳಿಸುವುದಾಗಿ ಥಿಯೇಟರ್ ಕಡೆಯಿಂದ ಭರವಸೆ ಸಿಕ್ಕಿದೆ. ಮೊದಲ ದಿನ ಬೆಂಗಳೂರಿನಲ್ಲಿ ಪುಷ್ಪ 2 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.