ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮೀಟೂ ಆರೋಪಗಳ ಬಗ್ಗೆ ದೂರು ಆಲಿಸಲು ಸಮಿತಿಯೊಂದನ್ನು ರಚಿಸಲಾಗಿದ್ದು ಇದರಲ್ಲಿ ಸ್ಯಾಂಡಲ್ ವುಡ್ ಅಲ್ಲದೆ, ವಕೀಲರು, ಸಾಮಾಜಿಕ ಹೋರಾಟಗಾರರೂ ಸೇರಿಕೊಂಡಿದ್ದಾರೆ.
ಇತ್ತೀಚೆಗೆ ಮಲಯಾಳಂನಲ್ಲಿ ಮೀಟೂ ಆರೋಪಗಳ ಬಗ್ಗೆ ಹೇಮಾ ಕಮಿಟಿ ವರದಿ ಬಹಿರಂಗವಾಗಿ ಸಿನಿಮಾ ರಂಗದಲ್ಲಿ ತಲ್ಲಣ ಸೃಷ್ಟಿಸಿತ್ತು. ಅನೇಕ ಘಟಾನುಘಟಿ ತಾರೆಯರ ವಿರುದ್ಧವೇ ಆರೋಪಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಕನ್ನಡದಲ್ಲೂ ಮೀಟೂ ಆರೋಪಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚನೆಯಾಗಬೇಕು ಎಂದು ವಾಣಿಜ್ಯ ಮಂಡಳಿಯಲ್ಲಿ ಸಭೆಯೊಂದು ನಡೆದಿತ್ತು.
ಅದರಂತೆ ಈಗ ಸಮಿತಿಯೊಂದು ರಚನೆಯಾಗಿದ್ದು ಈ ಸಮಿತಿಯಲ್ಲಿ ನಿರ್ದೇಶಕಿ ಕವಿತಾ ಲಂಕೇಶ್, ನಟಿ ಪ್ರಮೀಳಾ ಜೋಷಾಯ್, ಶ್ರುತಿ ಹರಿಹರನ್, ನಿರ್ಮಾಪಕ ಸಾ ರಾ ಗೋವಿಂದು ಸೇರಿದಂತೆ ಅನೇಕರಿದ್ದಾರೆ. ಈ ಕಮಿಟಿಗೆ ಕವಿತಾ ಲಂಕೇಶ್ ಮುಖ್ಯಸ್ಥೆಯಾಗಿದ್ದು ಓರ್ವ ಪತ್ರಕರ್ತ, ಓರ್ವ ವಕೀಲೆ, ಓರ್ವ ಸಾಮಾಜಿಕ ಹೋರಾಟಗಾರ್ತಿಯೂ ಸದಸ್ಯರಾಗಿದ್ದಾರೆ.
ಸ್ಯಾಂಡಲ್ ವುಡ್ ಕಲಾವಿದರು ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ್ದರೆ ಈ ಸಮಿತಿಗೆ ದೂರು ನೀಡಬಹುದು. ನಮಗೆ ಮಹಿಳೆಯರ ಸುರಕ್ಷತೆ ಮುಖ್ಯ. ಅದಕ್ಕಾಗಿಯೇ ಮಹಿಳೆಯರಿಗೆ ಆಗಿರುವ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿರುವುದಾಗಿ ವಾಣಿಜ್ಯ ಮಂಡಳಿ ಮುಖ್ಯಸ್ಥ ಸುರೇಶ್ ಹೇಳಿದ್ದಾರೆ.