Publish Date: Sat, 30 Mar 2024 (09:56 IST)
Updated Date: Sat, 30 Mar 2024 (09:56 IST)
ಚೆನ್ನೈ: ತಮಿಳಿನ ಖ್ಯಾತ ನಟ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ ಕೇವಲ 48 ವರ್ಷ ವಯಸ್ಸಾಗಿತ್ತು.
ಚಿಕ್ಕವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದು ಅವರ ಅಭಿಮಾನಿಗಳಿಗೆ ಆಘಾತ ತಂದಿದೆ. ಪ್ರೊಡಕ್ಷನ್ ಮ್ಯಾನೇಜರ್ ಆಗಿ ಚಿತ್ರರಂಗಕ್ಕೆ ಬಂದ ಡ್ಯಾನಿಯಲ್ ಬಳಿಕ ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ ಮಿಂಚಿದ್ದರು. ಸಿನಿಮಾಗಳಲ್ಲದೇ ಧಾರವಾಹಿಗಳಲ್ಲೂ ಅಭಿನಯಿಸಿದ್ದರು.
ಗೌತಮ್ ಮೆನನ್ ನಿರ್ದೇಶನದ ನಟ ಸೂರ್ಯ ನಾಯಕರಾಗಿ ಅಭಿನಯಿಸಿದ್ದ ಕಾಕ ಕಾಕ ಸಿನಿಮಾಗೆ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಕಮಲ್ ಹಾಸನ್ ಜೊತೆಗೆ ವೇಟ್ಟೈಯಾಡ್, ವಿಳಯಾಡ್, ಮಮ್ಮುಟ್ಟಿ ಜೊತೆಗೆ ಬ್ಲ್ಯಾಕ್, ಮೋಹನ್ ಲಾಲ್ ಜೊತೆಗೆ ಭಗವಾನ್ ಸಿನಿಮಾಗಳಲ್ಲಿ ವಿಲನ್ ಆಗಿ ಬಣ್ಣ ಹಚ್ಚಿದ್ದರು.
ತೀವ್ರ ಎದೆನೋವಿಗೊಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಇಂದು ಅಂತ್ಯಕ್ರಿಯೆ ನೆರವೇರಲಿದೆ.