ಚೆನ್ನೈ: ಮೊನ್ನೆಯಷ್ಟೇ ಇಹಲೋಕ ತ್ಯಜಿಸಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಆಸ್ಪತ್ರೆ ಬಿಲ್ ಬಗ್ಗೆ ವದಂತಿ ಹಬ್ಬಿದ್ದು, ಈ ಬಗ್ಗೆ ಪುತ್ರ ಎಸ್ ಪಿ ಚರಣ್ ಸ್ಪಷ್ಟನೆ ನೀಡಿದ್ದಾರೆ.
ಎಸ್ ಪಿ ಬಿ ಸುಮಾರು ಒಂದು ತಿಂಗಳು ಕಾಲ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಎಂಜಿಎಂ ಆಸ್ಪತ್ರೆ ಅವರಿಗೆ ದುಬಾರಿ ಮೊತ್ತದ ಬಿಲ್ ನೀಡಿದೆ ಎಂಬ ಸುದ್ದಿ ಹರಡಿತ್ತು. ‘ನಮ್ಮ ತಂದೆ ಒಂದು ತಿಂಗಳ ಕಾಲದ ಆಸ್ಪತ್ರೆ ಬಿಲ್ ಬಗ್ಗೆ ಕೆಲವರು ಬೇಕೆಂದೇ ವದಂತಿ ಹಬ್ಬಿಸುತ್ತಿದ್ದಾರೆ. ಆಸ್ಪತ್ರೆ ಭಾರೀ ಮೊತ್ತ ನೀಡಿದೆ, ನಾನು ಅರ್ಧದಷ್ಟು ಪಾವತಿಸಿದೆ. ಉಳಿದ ಬಿಲ್ ಗೆ ತಮಿಳುನಾಡು ಸರ್ಕಾರದ ಬಳಿ ಮನವಿ ಮಾಡಿದ್ದೇನೆ ಇತ್ಯಾದಿ. ಇಂತಹವರೆಲ್ಲಾ ನಿಜವಾದ ಎಸ್ ಪಿ ಅಭಿಮಾನಿಗಳಲ್ಲ. ನಮ್ಮ ತಂದೆ ಅಲ್ಲಿರುವಷ್ಟು ದಿನವೂ ಎಂಜಿಎಂ ಆಸ್ಪತ್ರೆ ತಮ್ಮ ಸ್ವಂತ ಕುಟುಂಬ ಸದಸ್ಯನಂತೆ ನೋಡಿಕೊಂಡಿದೆ. ಅವರಿಗೆ ನಾವು ಎಷ್ಟು ಕೃತಜ್ಞತೆ ಹೇಳಿದರೂ ಸಾಕಾಗದು. ಆಸ್ಪತ್ರೆ ಎಷ್ಟು ಚಾರ್ಜ್ ಮಾಡಿದೆ, ನಾನು ಎಷ್ಟು ನೀಡಿದ್ದೇನೆ ಎಂಬುದು ನಮಗೆ ಗೊತ್ತಿದೆ. ಇದನ್ನು ಸದ್ಯದಲ್ಲೇ ನಾವು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಬಹಿರಂಗಪಡಿಸುತ್ತೇವೆ’ ಎಂದು ಎಸ್ ಪಿ ಪಿ ಪುತ್ರ ವದಂತಿಕೋರರಿಗೆ ಚಾಟಿಯೇಟು ನೀಡಿದ್ದಾರೆ.