ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ನಾದಬ್ರಹ್ಮ ಎಂದೇ ಕರೆಯಿಸಿಕೊಳ್ಳುವ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಬಗ್ಗೆ ಗಾಯಕ ಶಂಕರ್ ಶಾನುಭೋಗ್ ಹಿರಿಯ ಸಿನಿಮಾ ಪತ್ರಕರ್ತ ಬಿ ಗಣಪತಿಯವರ ಯೂ ಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರಿಂದಾದ ಕಹಿ ಘಟನೆಗಳ ಬಗ್ಗೆ ವಿವರಿಸಿದ್ದಾರೆ.
ಹರಿದಾಸ ಪರಂಪರೆಯ ಗಾಯಕರಾಗಿರುವ ಶಂಕರ್ ಶಾನುಭೋಗ್ ಕನ್ನಡದಲ್ಲಿ ಹಲವು ಸಿನಿಮಾ ಗೀತೆಗಳನ್ನೂ ಹಾಡಿದ್ದಾರೆ. ಇದು ಏಳೇಳು ಜನುಮದ ಲವ್, ಜಿಂಕೆ ಮರಿ ಓಡ್ತಾ ಇದೆ ನೋಡ್ಲಾ ಮಗಾ ಎನ್ನುವಂತಹ ಹಿಟ್ ಹಾಡುಗಳನ್ನು ಕೊಟ್ಟವರು. ಇತ್ತೀಚೆಗೆ ಬಿ ಗಣಪತಿಯವರ ಸಂದರ್ಶನದಲ್ಲಿ ಸಂಗೀತ ನಿರ್ದೇಶಕರ ಅಸಲಿ ವರಸೆಯನ್ನು ಅವರು ಬಿಚ್ಚಿಟ್ಟಿದ್ದಾರೆ.
ಹಿರಿಯ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಅವರಿಂದ ಹಿಡಿದು ಹಂಸಲೇಖವರೆಗೆ ದುಡಿಸಿ ಸರಿಯಾಗಿ ಸಂಬಳ ಕೊಡದೇ ಇದ್ದ ಕತೆಗಳನ್ನು ಹೇಳಿದ್ದಾರೆ. ಹಂಸಲೇಖ ಬಗ್ಗೆ ಮಾತನಾಡಿರುವ ಅವರು ಯಾವ ಸೀಮೆ ನಾದಬ್ರಹ್ಮ ರೀ ಅವರು. ಹಾಗೆ ಕರೆಯಿಸಿಕೊಳ್ಳಲು ಅವರಿಗೆ ಅರ್ಹತೆ ಇದೆಯಾ? ಅವರಾದರೂ ಹೇಳಬೇಡವೇ ನನಗೆ ಹಾಗೊಂದು ಬಿರುದು ಕೊಡಬೇಡಿ, ಅದಕ್ಕೆ ನಾನು ಅರ್ಹನಲ್ಲ ಎಂದು ಹೇಳಿದ್ದಾರೆ.
ಹಿಂದೊಮ್ಮೆ ನನ್ನ ಹಾಡಿನ ವೇತನವನ್ನು ಕೊಡದೇ ಸತಾಯಿಸಿದರು. ಬಳಿಕ ಆವತ್ತು ಅವರ ಮೂಡ್ ಸರಿ ಇರಲಿಲ್ಲವೇನೋ. ವೇತನ ಕೇಳಲು ಹೋದಾಗ ಎಷ್ಟು ಕೋಟಿ ಕೊಡಬೇಕಪ್ಪಾ ನಿನಗೆ ಎಂದು ಅವಮಾನಿಸಿದರು. ಅದಾದ ಬಳಿಕ ಕ್ಷಮಿಸಿ ಎಂದು ಅಲ್ಲಿಂದ ಬಂದೆ. ಮತ್ತೆ ಸಂಭಾವನೆ ಕೇಳಲು ಹೋಗಲೇ ಇಲ್ಲ. ಆಗ ನನಗೆ ಕಷ್ಟವಿತ್ತು.
ಇನ್ನು ರಾಘವೇಂದ್ರ ರಾಜ್ ಕುಮಾರ್ ನಾಯಕರಾಗಿರುವ ಸ್ವಸ್ತಿಕ್ ಸಿನಿಮಾದ ಏಳೇಳು ಜನುಮದ ಲವ್ ಹಾಡನ್ನು ಕಂಪೋಸ್ ಮಾಡಿದ್ದು ವಿ ಮನೋಹರ್. ಆದರೆ ಒಂದು ದಿನ ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋನಲ್ಲಿ ಇದೇ ನಾದಬ್ರಹ್ಮ ಎಂದು ಕರೆಯಿಸಿಕೊಳ್ಳುವ ಹಂಸಲೇಖ ಒಬ್ಬರು ಈ ಹಾಡನ್ನು ಹಾಡಿದ ಬಳಿಕ ತಮ್ಮ ವಿಮರ್ಶೆ ಹೇಳುವಾಗ ಈ ಹಾಡನ್ನು ಫ್ರೀ ಆಗಿ ಹಾಡು ಎಂದು ಶಂಕರ್ ಗೆ ಹೇಳಿದ್ದೆ ಎಂದು ಬಿಟ್ಟರು. ಎಂಥಾ ಹಸಿ ಸುಳ್ಳು ಅದು. ಅಸಲಿಗೆ ಆ ಹಾಡನ್ನು ಅವರು ಕಂಪೋಸ್ ಮಾಡಿಯೇ ಇಲ್ಲ. ಅವರು ಅಲ್ಲಿ ಸೀನ್ ಲ್ಲೇ ಇರಲಿಲ್ಲ. ಮತ್ತೆ ಅವರು ನನಗೆ ಫ್ರೀ ಆಗಿ ಹಾಡು ಎಂದು ಹೇಳುವುದು ಎಲ್ಲಿಂತ ಬಂತು. ಯಾರೋ ಮಾಡಿದ ಕೆಲಸಕ್ಕೂ ತಾವು ಮಾಡಿದ್ದು ಎಂದು ಕ್ರೆಡಿಟ್ ತೆಗೆದುಕೊಳ್ಳುತ್ತಾರಲ್ಲಾ ಎಂದು ನನಗೆ ನಗು ಬಂತು ಎಂದು ಶಂಕರ್ ಶಾನುಭೋಗ್ ಹೇಳಿದ್ದಾರೆ. ಅವರ ಈ ಸಂದರ್ಶನ ಬಿ ಗಣಪತಿಯವರ ಯೂ ಟ್ಯೂಬ್ ವಾಹಿನಿಯಲ್ಲಿದೆ.