Publish Date: Mon, 15 Jul 2024 (13:33 IST)
Updated Date: Mon, 15 Jul 2024 (13:36 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಯಾರ ಗೋಜಿಗೂ ಹೋಗದೇ ತಮ್ಮದೇ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೇಲೆ ಈಗ ಪ್ರಕರಣವೊಂದು ದಾಖಲಾಗಿದೆ. ಅಷ್ಟಕ್ಕೂ ಇದು ಯಾವ ಕೇಸ್ ಇಲ್ಲಿದೆ ವಿವರ.
ತಮ್ಮ ಸಿನಿಮಾದಲ್ಲಿ ಎರಡು ಸಿನಿಮಾ ಹಾಡುಗಳನ್ನು ಅನುಮತಿಯಿಲ್ಲದೇ ಬಳಸಿಕೊಂಡಿದ್ದಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೇಲೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ನಟ ರಕ್ಷಿತ್ ಶೆಟ್ಟಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ದೂರವಾಣಿ ಮುಖಾಂತರ ಮಾಹಿತಿ ನೀಡಿದ್ದಾರೆ.
ರಕ್ಷಿತ್ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿದ್ದ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಎರಡು ಹಳೆಯ ಹಾಡುಗಳನ್ನು ಬಳಕೆ ಮಾಡಲಾಗಿದೆ. ನ್ಯಾಯ ಎಲ್ಲಿದೆ.., ಗಾಳಿಮಾತು ಹಾಡುಗಳನ್ನು ಅನುಮತಿಯಿಲ್ಲದೇ ಬಳಕೆ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿದೆ. ಈ ಸಂಬಂಧ ಎಂಆರ್ ಟಿ ಮ್ಯೂಸಿಕ್ ನ ಸಹ ಪಾಲುದಾರರಾದ ನವೀನ್ ಕುಮಾರ್ ಎಂಬವರು ರಕ್ಷಿತ್ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಹಾಡುಗಳನ್ನು ಬಳಕೆ ಮಾಡುವ ಬಗ್ಗೆ 2024 ರ ಜನವರಿಯಲ್ಲಿ ರಕ್ಷಿತ್ ಜೊತೆ ಮಾತುಕತೆ ನಡೆದಿತ್ತು. ಆದರೆ ಮಾತುಕತೆ ಸರಿ ಬರಲಿಲ್ಲ. ಆದರೆ ಆ ಬಳಿಕ ಹಾಡನ್ನು ಸಿನಿಮಾದಲ್ಲಿಬಳಕೆ ಮಾಡಲಾಗಿತ್ತು. ಹೀಗಾಗಿ ಈಗ ರಕ್ಷಿತ್ ವಿರುದ್ಧ ಹಕ್ಕು ಸ್ವಾಮ್ಯ ಪ್ರಸಾರದ ಹಕ್ಕನ್ನು ಅನುಮತಿಯಿಲ್ಲದೇ ಬಳಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.