Publish Date: Tue, 23 Jul 2024 (10:47 IST)
Updated Date: Tue, 23 Jul 2024 (10:49 IST)
ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೆಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂಥೆರೊ ನಿನ್ನೆಯಷ್ಟೇ ಅಧಿಕೃತವಾಗಿ ತಮ್ಮ ಮದುವೆ ಸುದ್ದಿಯನ್ನು ಹೊರಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಪ್ರಕಟಿಸಿರುವ ವಿಡಿಯೋಗೆ ಈಗ ಸಾಕಷ್ಟು ಕಾಮೆಂಟ್ ಗಳು ಹರಿದುಬರುತ್ತಿವೆ.
ಅದರಲ್ಲೂ ಹೆಚ್ಚಿನವರು ಕೇಳುತ್ತಿರುವ ಒಂದೇ ಪ್ರಶ್ನೆ ಎಂದರೆ ಅವರು ಬರ್ತಾರಾ ಎಂದು. ಇಲ್ಲಿ ಅವರು ಎಂದರೆ ಬೇರೆ ಯಾರೂ ಅಲ್ಲ ಡಿ ಬಾಸ್. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮದುವೆ ವೇಳೆಗೆ ಬಿಡುಗಡೆಯಾಗಿ ಜೈಲಿನಿಂದ ಹೊರಬರಬಹುದೇ ಎಂಬ ಆಶಾಭಾವನೆ ಅಭಿಮಾನಿಗಳದ್ದು.
ತಮ್ಮ ಮದುವೆ ಸುದ್ದಿ ಹೊರಹಾಕುವ ಮೊದಲು ತರುಣ್ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಿ ಬಂದಿದ್ದರು. ಈ ವೇಳೆ ನನಗಾಗಿ ಮದುವೆ ದಿನಾಂಕ ಮುಂದೂಡುವುದು ಬೇಡ. ಮದುವೆ ಸಮಯಕ್ಕೆ ಬರುತ್ತೇನೆ ಎಂದಿದ್ದರಂತೆ. ತರುಣ್-ಸೋನಲ್ ಮದುವೆಯಿರುವುದು ಆಗಸ್ಟ್ 11 ಕ್ಕೆ. ದರ್ಶನ್ ನ್ಯಾಯಾಂಗ ಬಂಧನ ಅವಧಿ ಆಗಸ್ಟ್ 1 ಕ್ಕೆ ಮುಗಿಯುತ್ತದೆ. ಅದಾದ ಬಳಿಕ ಅವರು ಜಾಮೀನಿಗೆ ಅರ್ಜಿ ಸಲ್ಲಿಸಬಹುದು.
ಆದರೆ ಕೇಸ್ ಬಹಳ ಸ್ಟ್ರಾಂಗ್ ಆಗಿದ್ದು ಆಗಲೂ ದರ್ಶನ್ ಗೆ ಜಾಮೀನು ಸಿಗುವುದು ಅನುಮಾನ. ಹಾಗಿದ್ದರೂ ಫ್ಯಾನ್ಸ್ ಮಾತ್ರ ಮದುವೆಗೆ ನಮ್ಮ ಬಾಸ್ ಬಂದಿದ್ದರೆ ಕಳೆಯೇ ಬೇರೆ ಇರ್ತಿತ್ತು. ಅವರಿಲ್ಲದ ಮದುವೆ ಎಂದರೆ ಯಾಕೋ ಬೇಸರವಾಗುತ್ತಿದೆ. ಮದುವೆಗೆ ಅವರು ಬರ್ತಾರಾ ಅಣ್ಣ ಎಂದು ತರುಣ್ ಗೆ ಪ್ರಶ್ನೆ ಮಾಡುತ್ತಿದ್ದಾರೆ.