ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಅವರು ಅಮೆರಿಕದಲ್ಲಿ ಸರ್ಜರಿ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ನಟ ಶಿವರಾಜ್ಕುಮಾರ್ ಅವರು ಇತ್ತೀಚೆಗೆ ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿ ಶಸ್ತ್ರಚಿಕಿತ್ಸೆ ಕೂಡ ಅವರು ಮಾಡಿಸಿಕೊಂಡಿದ್ದರು.
ಈಗ ಅವರು ಕ್ಯಾನ್ಸರ್ ಮುಕ್ತರಾಗಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಶಸ್ತ್ರಚಿಕಿತ್ಸೆ ನಡೆದಿತ್ತು. ಈಗ ಶಿವಣ್ಣ ಅವರು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಶಿವಣ್ಣ ಅವರು ಆಸ್ಪತ್ರೆ ಪಕ್ಕದಲ್ಲೇ ಇರುವ ಹೋಟೆಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಕುಟುಂಬದ ಜೊತೆ ನಿಂತಿರುವ ಫೋಟೋ ವೈರಲ್ ಆಗಿದೆ.
ಕ್ಯಾನ್ಸರ್ ಸರ್ಜರಿ ಯಶಸ್ವಿ ಆಗಿದ್ದರೂ ಕೆಲ ದಿನಗಳ ಕಾಲ ಅವರು ಅಲ್ಲಿಯೇ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ. ಹೀಗಾಗಿ, ಜನವರಿ 24ರವರೆಗೆ ಶಿವರಾಜ್ಕುಮಾರ್ ಅಮೆರಿಕದಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಆ ಬಳಿಕ ಅವರು ಬೆಂಗಳೂರಿಗೆ ಬಂದ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಶಿವರಾಜ್ಕುಮಾರ್ ಅವರು ಸಿನಿಮಾ ಕೆಲಸಕ್ಕೆ ಮರಳಲಿದ್ದಾರೆ.
ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾದ ಶಿವಣ್ಣ ಕೆಲ ದಿನಗಳ ಹಿಂದಷ್ಟೇ ಅಭಿಮಾನಿಗಳಿಗೆ ವೀಡಿಯೋ ಸಂದೇಶ ಕಳುಹಿಸಿದ್ದರು. ಕ್ಯಾನ್ಸರ್‌ನಿಂದ ಗುಣಮುಖರಾಗಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದರು. ಶೀಘ್ರವೇ ಬೆಂಗಳೂರಿಗೆ ವಾಪಸ್ ಆಗಿ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದರು.