ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಗೆ ಜೈಲ್ ನಿಂದ ಬೇಲ್ ಪಡೆದು ಹೊರಬಂದರೂ ಬೆನ್ನು ನೋವು ಬಿಡುತ್ತಿಲ್ಲ. ಇದೀಗ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು, ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ.
ಬಳ್ಳಾರಿ ಜೈಲಿನಲ್ಲಿದ್ದಾಗ ದರ್ಶನ್ ಗೆ ತೀವ್ರವಾಗಿ ಬೆನ್ನು ನೋವು ಕಾಡುತ್ತಿತ್ತು. ಈ ಹಿಂದೆ ಚಿತ್ರೀಕರಣದ ಸಂದರ್ಭದಲ್ಲಿ ಆದ ಗಾಯದ ಪರಿಣಾಮ ಇದಾಗಿತ್ತು. ಐಷಾರಾಮಿ ಜೀವನ ಮಾಡುತ್ತಿದ್ದಾಗ ಬೆನ್ನು ನೋವು ಸಮಸ್ಯೆಯಾಗಿರಲಿಲ್ಲ. ಆದರೆ ಬಳ್ಳಾರಿ ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಕಾಲ ಕಳೆದಿದ್ದ ದರ್ಶನ್ ಗೆ ಬೆನ್ನು ನೋವು ವಿಪರೀತವಾಗಿತ್ತು.
ಇದೇ ಕಾರಣಕ್ಕೆ ಅವರು ಮಧ್ಯಂತರ ಜಾಮೀನು ಪಡೆದು ಒಂದು ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿ ಒಂದು ತಿಂಗಳು ಇದ್ದೂ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಫಿಸಿಯೋ ಥೆರಪಿಯಲ್ಲೇ ದಿನ ತಳ್ಳುತ್ತಿದ್ದರು. ಕೊನೆಗೆ ರೆಗ್ಯುಲರ್ ಜಾಮೀನು ಸಿಕ್ಕ ಮೇಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.
ಆದರೂ ಅವರ ಬೆನ್ನು ನೋವು ಯಾಕೋ ವಾಸಿಯಾಗುತ್ತಿಲ್ಲ. ಇದೀಗ ಅವರಿಗೆ ನಡೆದಾಡಲೂ ಕಷ್ಟವಾಗುತ್ತಿದ್ದು, ಈ ಕಾರಣಕ್ಕೆ ಆಪರೇಷನ್ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಸಂಕ್ರಾಂತಿ ವೇಳೆಗೆ ಮೈಸೂರಿನಲ್ಲಿಯೇ ದರ್ಶನ್ ಆಪರೇಷನ್ ಗೊಳಗಾಗುವ ಸಾಧ್ಯತೆಯಿದೆ. ಅದಾದ ಬಳಿಕ ಕೆಲವು ದಿನ ಮತ್ತೆ ವಿಶ್ರಾಂತಿ ಪಡೆಯಬೇಕಾಗಬಹುದು. ಹೀಗಾಗಿ ಅವರ ಸಿನಿಮಾ ಕೆಲಸಗಳು ಮತ್ತೆ ಮುಂದೂಡಿಕೆಯಾಗಲಿದೆ.