ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ 14 ವರ್ಷಗಳೇ ಕಳೆದಿದೆ.
2009 ರ ಡಿಸೆಂಬರ್ 30 ರಂದು ಅಭಿಮಾನಿಗಳ ಪ್ರೀತಿಯ ಸಾಹಸಸಿಂಹ ಇಹಲೋಕ ತ್ಯಜಿಸಿದ್ದರು. ಕನ್ನಡ ಮಾತ್ರವಲ್ಲದೆ, ಪರಭಾಷೆಗಳಲ್ಲೂ ನಟಿಸಿ ತಮ್ಮದೇ ಛಾಪು ಮೂಡಿಸಿದ್ದ ನಟ ಎಂದೆಂದಿಗೂ ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಅವರು ಸಾಯುವಾಗ ಅವರಿಗೆ ಕೇವಲ 59 ವರ್ಷ ವಯಸ್ಸು. ತಮ್ಮ ನೆಚ್ಚಿನ ಮೈಸೂರಿನಲ್ಲಿಯೇ ಹಠಾತ್ ನಿಧನರಾಗಿದ್ದರು. ಆ ಸಂದರ್ಭದಲ್ಲಿ ಪತ್ನಿ ಭಾರತಿ ವಿಷ್ಣುವರ್ಧನ್ ಅವರ ಜೊತೆಗಿದ್ದರು. ಬಳಿಕ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಿದ್ದರೂ ಆ ಜಾಗ ವಿವಾದದ ಕೇಂದ್ರವಾಗಿತ್ತು. ಮೊನ್ನೆ ಮೊನ್ನೆಯಷ್ಟೇ ವಿಷ್ಣುವರ್ಧನ್ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಪೂಜೆ ಸಲ್ಲಿಸಲು ಅವಕಾಶ ಕೊಡಿ ಎಂದು ಪ್ರತಿಭಟೆನೆಯನ್ನೇ ಮಾಡಿದ್ದರು.
ಕುಟುಂಬಸ್ಥರ ಹೋರಾಟದ ಫಲದಿಂದಾಗಿ ಅವರು ಬಹಳವಾಗಿ ಇಷ್ಪಪಡುತ್ತಿದ್ದ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಇಂದು ಅವರ ಪುಣ್ಯತಿಥಿಯಂದು ಅವರ ಅಭಿಮಾನಿಗಳು, ವಿಭಾ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.