ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿನ್ನೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಹತ್ವದ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿ ಉಳಿಸುವ ಸಲುವಾಗಿ ನಿನ್ನೆ ವಿಷ್ಣುಸೇನಾ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ಹೋರಾಟಕ್ಕೆ ಕಿಚ್ಚ ಸುದೀಪ್, ಡಾಲಿ ಧನಂಜಯ್, ನೀನಾಸಂ ಸತೀಶ್, ವಸಿಷ್ಠ ಸಿಂಹ ಸೇರಿದಂತೆ ಹಲವು ನಟರು ಸೋಷಿಯಲ್ ಮೀಡಿಯಾ ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು.
ಆದರೆ ಕಿಚ್ಚ ಸುದೀಪ್ ತಮ್ಮ ಬೆಂಬಲವನ್ನು ಕೇವಲ ಸೋಷಿಯಲ್ ಮೀಡಿಯಾಗೆ ಸೀಮಿತಗೊಳಿಸದೇ ನೇರವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಡಿಕೆಶಿ ಭೇಟಿಯಾದ ಕಿಚ್ಚ ಸುದೀಪ್, ವಿಷ್ಣುವರ್ಧನ್ ಅಂತ್ಯಸಂಸ್ಕಾರವಾದ ಅಭಿಮಾನ್ ಸ್ಟುಡಿಯೋದಲ್ಲೇ ಅವರ ಪುಣ್ಯ ಭೂಮಿ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.